ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಟಿಕೆಟ್ ಆಕಾಂಕ್ಷಿಗಳಿಂದ ಒತ್ತಡ ಹೆಚ್ಚಾಗುತ್ತಿದೆ. ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕ ಎಸ್.ರಾಮಪ್ಪ ಅವರಿಗೆ ಎಂಟು ಆಕಾಂಕ್ಷಿಗಳಿಂದ ಸವಾಲು ಎದುರಾಗಿದೆ. ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದ ಕಾಂಗ್ರೆಸ್ಗೆ ಇದು ನುಂಗಲಾಗದ ಬಿಸಿತುಪ್ಪವಾಗಿ ಪರಿಣಮಿಸಿದ್ದು, ಬಹುತೇಕ ಕ್ಷೇತ್ರಗಳಲ್ಲಿ ಐದಕ್ಕೂ ಹೆಚ್ಚು ಮಂದಿಯಿಂದ ಒತ್ತಡವಿದೆ. ಟಿಕೆಟ್ ಗಿಟ್ಟಿಸಲು ಅವರೆಲ್ಲ ದೊಡ್ಡ ಮಟ್ಟದ ಲಾಬಿ ಆರಂಭಿಸಿದ್ದಾರೆ.
ಹರಿಹರ ಕ್ಷೇತ್ರದಿಂದ ಟಿಕೆಟ್ ಬಯಸಿ ಹಾಲಿ ಶಾಸಕ ಎಸ್.ರಾಮಪ್ಪ ಸೇರಿ ಒಟ್ಟು 9 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪ್ರತಿಯೊಬ್ಬರಿಗೂ ಗೆಲ್ಲುವ ವಿಶ್ವಾಸವಿದ್ದು, ತಮಗೇ ಟಿಕೆಟ್ ನೀಡಿ ಎಂದು ಪಕ್ಷದ ನಾಯಕರ ಮುಂದೆ ದುಂಬಾಲು ಬಿದ್ದಿದ್ದಾರೆ. ಅರ್ಜಿ ಸಲ್ಲಿಕೆಗೆ ದೊಡ್ಡ ಸಂಖ್ಯೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂಭಾಗ ಶಕ್ತಿ ಪ್ರದರ್ಶನವನ್ನೂ ಮಾಡಿದ್ದಾರೆ.
2008ರಿಂದ ಇಲ್ಲಿಯವರೆಗೆ ನಡೆದ ಮೂರು ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಒಂದೊಂದು ಸಾರಿ ಗೆದ್ದಿವೆ. 2008ರಲ್ಲಿ ಬಿಜೆಪಿಯ ಬಿ.ಪಿ.ಹರೀಶ್ ಅವರು ಜೆಡಿಎಸ್ನ ಎಚ್.ಶಿವಪ್ಪ ವಿರುದ್ಧ 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. 2013ರಲ್ಲಿ ಜೆಡಿಎಸ್ನ ಎಚ್.ಎಸ್.ಶಿವಶಂಕರ್ ಅವರು ಕಾಂಗ್ರೆಸ್ನ ಎಸ್.ರಾಮಪ್ಪ ವಿರುದ್ಧ 19 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ಪಡೆದಿದ್ದರು. 2018ರಲ್ಲಿ ಎಸ್.ರಾಮಯ್ಯ ಬಿಜೆಪಿಯ ಬಿ.ಪಿ.ಹರೀಶ್ ವಿರುದ್ಧ 7 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು.
ಹರಿಹರದಲ್ಲಿ ಕುರುಬ ಸಮುದಾಯದ ಪ್ರಾಬಲ್ಯ ಹೆಚ್ಚಾಗಿದೆ. ಅಲ್ಲದೇ ಅಲ್ಪಸಂಖ್ಯಾತರು, ಲಿಂಗಾಯತ, ದಲಿತ ಸಮುದಾಯದವರೂ ಹೆಚ್ಚಿದ್ದಾರೆ. ಶಾಸಕ ರಾಮಪ್ಪ ಕುರುಬ ಸಮುದಾಯಕ್ಕೆ ಸೇರಿದವರು. ಅಲ್ಲದೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದು, ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದಾರೆ. ಆದರೆ ಹೊಸಬರಿಗೆ ಅವಕಾಶ ನೀಡುವಂತೆಯೂ ಒತ್ತಡ ಕೇಳಿಬರುತ್ತಿದೆ. ಆದರೆ ರಾಮಪ್ಪಗೆ ಇದು ಕೊನೆಯ ಚುನಾವಣೆ. ಮುಂದಿನ ಅವಧಿಗೆ ಬೇರೊಬ್ಬರಿಗೆ ಟಿಕೆಟ್ ನೀಡೋಣ ಎಂಬ ಮಾತು ಕೇಳಿಬರುತ್ತಿದೆ.
ಟಿಕೆಟ್ಗಾಗಿ ಅರ್ಜಿ ಸಲ್ಲಿಸಿರುವ ಇತರೆ ಆಕಾಂಕ್ಷಿಗಳೆಂದರೆ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಎಸ್.ದೇವೇಂದ್ರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎ.ನಾಗೇಂದ್ರ, ಎಚ್.ಮಹೇಶ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಬಾಬುಲಾಲ್, ಗೋವಿಂದರೆಡ್ಡಿ, ಉದ್ಯಮಿಗಳಾದ ಶ್ರೀನಿವಾಸ್ ಹಾಗು ಕೃಷ್ಣ ಅರ್ಜಿ ಸಲ್ಲಿಸಿ, ಬಾರಿ ಪೈಪೋಟಿ ನಡೆಸಿದ್ದಾರೆ.
ನಿಖಿಲ್ ಕೊಂಡಜ್ಜಿ ಅರ್ಜಿ ಸಲ್ಲಿಸುವ ಸಂದರ್ಭದಲ್ಲೇ ದಾವಣಗೆರೆಯಿಂದ ನೂರಾರು ಅಭಿಮಾನಿಗಳನ್ನು ಕರೆತಂದು ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂಭಾಗ ಶಕ್ತಿ ಪ್ರದರ್ಶನ ಮಾಡಿದ್ದರು. ಇದೀಗ ತಮಗೇ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನಗೆ ವಿಶ್ವಾಸವಿದೆ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಸಾರಿ ಯುವ ನಾಯಕರಿಗೆ ಹೆಚ್ಚಿನ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಇದಕ್ಕೆ ರಾಜ್ಯ ನಾಯಕರು ಮಾನ್ಯತೆ ನೀಡಲಿದ್ದಾರೆ ಎಂಬ ವಿಶ್ವಾಸವಿದೆ. ವಿಧಾನಸಭೆಗೆ ಯುವ ಸಮುದಾಯದವರ ಪ್ರವೇಶವಾದರೆ ಅನುಕೂಲ. ಹಾಗಾಗಿ, ಈ ಸಾರಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ನಿಖಿಲ್ ಕೊಂಡಜ್ಜಿ ಹೇಳಿದರು.
ಇದನ್ನೂ ಓದಿ: ಕಲಬುರಗಿ: ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ