ಬೆಂಗಳೂರು: ಶನಿವಾರವಷ್ಟೇ ನವದೆಹಲಿಗೆ ವಾಪಸ್ಸಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಹಳೆ ಮೈಸೂರು ಭಾಗ ಹಾಗೂ ಮಧ್ಯ ಕರ್ನಾಟಕದಲ್ಲಿ ಭರ್ಜರಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಈ ಬಾರಿಯ ಪ್ರವಾಸದ ವೇಳೆ ಇತ್ತೀಚೆಗೆ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಅವರ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲೂ ರಣತಂತ್ರ ರೂಪಿಸಲಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಚುನಾವಣಾ ಕದನ ಹಿನ್ನೆಲೆಯಲ್ಲಿ ಇಂದು ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಅಮಿತ್ ಶಾ ಮಗದೊಮ್ಮೆ ಎಂಟ್ರಿ ಕೊಡುತ್ತಿದ್ದಾರೆ. ಎರಡು ದಿನಗಳ ರಾಜ್ಯ ಪ್ರವಾಸಕ್ಕಾಗಿ ಮೈಸೂರಿಗೆ ಆಗಮಿಸಲಿದ್ದು, ಇಂದು ರಾತ್ರಿ 9.30ಗೆ ಮೈಸೂರಿಗೆ ಆಗಮಿಸಿ ರಾಡಿಸನ್ ಹೋಟೆಲ್ನಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 24 ರಂದು (ನಾಳೆ) ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಅಮಿತ್ ಶಾ ಭೇಟಿ ನೀಡಿ ನಾಡ ದೇವತೆ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: ಪತ್ನಿ ಅರುಣಾ ಲಕ್ಷ್ಮಿ ಗೆದ್ದರೆ ಬಳ್ಳಾರಿಯನ್ನು ರಾಜ್ಯದ ಎರಡನೇ ದೊಡ್ಡ ನಗರ ಮಾಡುವೆ: ಗಾಲಿ ಜನಾರ್ದನರೆಡ್ಡಿ
ನಂತರ ಗುಂಡ್ಲುಪೇಟೆಗೆ ಪ್ರಚಾರಕ್ಕೆ ತೆರಳಲಿರುವ ಅಮಿತ್ ಶಾ: ಗುಂಡ್ಲುಪೇಟೆಯಲ್ಲಿ ಅಮಿತ್ ಶಾ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಗುಂಡ್ಲುಪೇಟೆಯಿಂದ ಹಾಸನದ ಸಕಲೇಶಪುರಕ್ಕೆ ಅಮಿತ್ ಶಾ ತೆರಳಲಿದ್ದು, ಸಕಲೇಶಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ರೋಡ್ ಶೋ ನಡೆಸಲಿದ್ದಾರೆ. ನಂತರ ಮೈಸೂರಿಗೆ ವಾಪಸ್ಸಾಗಿ ಮೈಸೂರಿನಿಂದ ಹುಬ್ಬಳ್ಳಿಗೆ ತೆರಳಲಿದ್ದಾರೆ.
ಸೋಮವಾರ (ನಾಳೆ) ರಾತ್ರಿ ಹುಬ್ಬಳ್ಳಿಯಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಸಲಿದ್ದಾರೆ. ಈ ಬಾರಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರನ್ನು ಜಗದೀಶ್ ಶೆಟ್ಟರ್ ವಿರುದ್ಧ ಗೆಲ್ಲಿಸಲು ಮತ್ತು ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿಯೇ ಇರಬೇಕು ಎನ್ನುವ ಕಾರಣಕ್ಕೆ ವಿಶೇಷ ಸಭೆ ನಡೆಸಿ ತಂತ್ರ ರೂಪಿಸಲಿದ್ದಾರೆ. ಅಂದು ರಾತ್ರಿ ಹುಬ್ಬಳ್ಳಿಯಲ್ಲೇ ವಾಸ್ತವ್ಯ ಹೂಡಲಿರುವ ಅಮಿತ್ ಶಾ ಮುಂದಿನ ಪ್ರವಾಸವನ್ನು ಕಾಯ್ದಿರಿಸಿದ್ದಾರೆ.
ಮಳೆಯಿಂದ ರದ್ದಾಗಿದ್ದ ದೇವನಹಳ್ಳಿ ರೋಡ್ ಶೋ: ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಿ, ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರಣಕ್ಕೆ ಶುಕ್ರವಾರ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ರೋಡ್ ಶೋ ದೇವನಹಳ್ಳಿಯಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಅಂದು ಭಾರಿ ಮಳೆಯಿಂದ ಕೊನೆಯ ಕ್ಷಣದಲ್ಲಿ ರೋಡ್ ಶೋ ರದ್ದು ಮಾಡಲಾಗಿತ್ತು.
ಈ ಕುರಿತು ಶಾ ಟ್ವೀಟ್ ಕೂಡ ಮಾಡಿದ್ದರು. 'ಭಾರಿ ಮಳೆಯಿಂದಾಗಿ ದೇವನಹಳ್ಳಿ ಜನತೆಯೊಂದಿಗಿರಲು ಸಾಧ್ಯವಾಗಿಲ್ಲ. ಪ್ರತಿಕೂಲ ಹವಾಮಾನದ ಸಂದರ್ಭದಲ್ಲೂ ಭಾರಿ ಸಂಖ್ಯೆಯಲ್ಲಿ ಸೇರಿದ ಜನಸ್ತೋಮಕ್ಕೆ ಕೃತಜ್ಞನಾಗಿದ್ದೇನೆ. ಪ್ರಚಾರಕ್ಕಾಗಿ ದೇವನಹಳ್ಳಿಗೆ ಶೀಘ್ರದಲ್ಲೇ ಭೇಟಿ ನೀಡುತ್ತೇನೆ. ಕರ್ನಾಟಕದ ಜನರ ಉತ್ಸಾಹವು ಬೃಹತ್ ಗೆಲುವು ಸಾಧಿಸಲಿದೆ ಎಂಬುದನ್ನು ಪ್ರತಿಬಿಂಬಿಸುತ್ತಿದೆ' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ಹೆದರಿಕೊಳ್ಳಲು ನಾನು ಭೂತ ಅಲ್ಲ: ಸಚಿವ ಸೋಮಣ್ಣ ವ್ಯಂಗ್ಯ