ಬೆಂಗಳೂರು: ದೇಶದಲ್ಲಿ ಅತ್ಯಂತ ಕೊಳಕು ಭಾಷೆ ಕನ್ನಡ ಎಂದು ಹೇಳಿ ವಿವಾದ ಮೈ ಮೇಲೆ ಎಳೆದುಕೊಂಡಿರುವ ಗೂಗಲ್ ಕಂಪನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕನ್ನಡ ಪರ ಸಂಘಟನೆ ಬೈಯ್ಯಪ್ಪನಹಳ್ಳಿ ಠಾಣೆಗೆ ದೂರು ನೀಡಿದೆ.
ಕನ್ನಡವು ದೇಶದ ಕೆಟ್ಟ ಭಾಷೆ ಎಂದು ಗೂಗಲ್ ಸರ್ಚ್ನಲ್ಲಿ ತೋರಿಸುತ್ತಿದ್ದಂತೆ ಕನ್ನಡಗರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಪ್ರವೀಣ್ ಶೆಟ್ಟಿ ನೇತೃತ್ವದ ಕರವೇ ಕಾರ್ಯಕರ್ತರು ಬೆನ್ನಿಗಾನಹಳ್ಳಿ ಬಳಿಯ ಗೂಗಲ್ ಸಂಸ್ಥೆ ಮುಂದೆ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಬಳಿಕ ಬೈಯ್ಯಪ್ಪನ ಹಳ್ಳಿ ಠಾಣೆಗೆ ದೂರು ನೀಡಿದರು. ಬಳಿಕ ಕನ್ನಡಿಗರ ವಿರೋಧಕ್ಕೆ ಮಣಿದ ಗೂಗಲ್ ಕೂಡಲೇ ಅವಹೇಳನಕಾರಿ ವಿಚಾರವನ್ನು ತೆಗೆದು ಹಾಕಿದೆ.
ಕನ್ನಡ ಸಾಹಿತ್ಯ ಪರಿಷತ್ನಿಂದಲೂ ಆಕ್ರೋಶ:
ಗೂಗಲ್ ಸರ್ಚ್ ಇಂಜಿನ್ನಲ್ಲಿ ಭಾರತದ ಅತ್ಯಂತ ಕುರೂಪ (ಅಗ್ಲಿ) ಭಾಷೆ ಯಾವುದು ಎಂಬ ಪ್ರಶ್ನೆಗೆ, ಕನ್ನಡ ಎಂಬ ಉತ್ತರ ಸಿಗುತ್ತಿತ್ತು. ಈ ವಿಚಾರ ವಾಟ್ಸ್ಆ್ಯಪ್, ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡತೊಡಗಿತು. ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ಸದ್ಯ ಇದನ್ನು ಡಿಲೀಟ್ ಮಾಡಲಾಗಿದೆ.
ಆದರೆ, ಮಾತೃಭಾಷೆಗೆ ಅವಮಾನ ಮಾಡಿದ, ಇಂತಹ ಮಾಹಿತಿಯನ್ನ ಪ್ರಸಾರ ಮಾಡಿದ್ದಕ್ಕೆ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಮನು ಬಳಿಗಾರ್ ಆಗ್ರಹಿಸಿದ್ದಾರೆ. ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಗಳು ಈ ಸಂಸ್ಥೆಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಅನುಸಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.