ಬೆಂಗಳೂರು: ಕರಗ ನಮ್ಮ ರಾಜಧಾನಿಯ ವಿಶೇಷ, ವಿಶಿಷ್ಟ ಹಾಗೂ ವಿಭಿನ್ನ ಆಚರಣೆ. ಬೆಂಗಳೂರು ಕರಗ ತನ್ನದೇ ಆದ ಧಾರ್ಮಿಕ ಹಿನ್ನೆಲೆ, ಪಾವಿತ್ರ್ಯತೆ ಕೂಡ ಹೊಂದಿದೆ. 11 ದಿನಗಳ ಈ ಉತ್ಸವದಲ್ಲಿ ಹೂವಿನ ಕರಗವೇ ಮುಖ್ಯ ಕೇಂದ್ರ ಬಿಂದುವಾಗಿದೆ. ಕೋವಿಡ್ ಎರಡನೇ ಅಲೆಯ ಕರಿ ನೆರಳು ಈ ಬಾರಿಯೂ ಐತಿಹಾಸಿಕ ಕರಗದ ಮೇಲೆ ಬಿದ್ದಿದ್ದು, ಬೆರಳೆಣಿಕೆಯಷ್ಟು ಜನರ ಸಮ್ಮುಖದಲ್ಲಿ ನಡೆದಿದೆ.
ಈ ಬಾರಿ ಕೊರೊನಾ ಹಿನ್ನೆಲೆ ಧರ್ಮರಾಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಾತ್ರ ಮಹೋತ್ಸವ ನಡೆಯಲಿದೆ. ಇಂದು ಬೆಳಗ್ಗೆಯಿಂದಲೇ ಹಲವು ಶಾಸ್ತ್ರ ಸಂಪ್ರದಾಯವನ್ನ ನೆರವೇರಿಸಲಾಗುತ್ತಿದೆ.
ಕಬ್ಬನ್ ಪಾರ್ಕ್ನ ಕರಗ ಕುಂಟೆಯಲ್ಲಿ ಕರಗ ಹೊರುವವರಿಗೆ ಕೊನೆಯ ಶುದ್ಧಿ ಸ್ನಾನ ಮಾಡಿಸಲಾಗುತ್ತಿತ್ತು. ನಂತರ ಅಲ್ಲಿಯೇ ತಿಗಳ ಜನಾಂಗದವರು ಸೇರಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಈ ಬಾರಿ ಕೇವಲ 5 ಕುಟುಂಬಗಳಿಗೆ ಅವಕಾಶ ನೀಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಅಲ್ಲಿಂದ ಹೊರಟ ಕರಗ ಹೊರುವ ಪೂಜಾರಿಯನ್ನ ಹೊಂಗೆ ಗಿಡಗಳೊಂದಿಗೆ ಮೆರವಣೆಗೆ ಹೋಗಲಾಗುತ್ತಿತ್ತು. ಈ ಹೊಂಗೆ ಗಿಡವನ್ನ ಬಳಸಿ, ಚಪ್ಪರ ನಿರ್ಮಿಸಿ, ಅಲ್ಲಿ ದ್ರೌಪದಿ ಅವತಾರದ ಪೂಜಾರಿಗೆ ಕೆಲವು ಶಾಸ್ತ್ರಗಳನ್ನ ಮಾಡಲಾಗುತ್ತಿತ್ತು. ಧರ್ಮರಾಯ ದೇವಸ್ಥಾನದಿಂದ ಒಂದು ಕಿ.ಮೀ. ಉದ್ದಕ್ಕೂ ಕರ್ಪೂರ ಹಚ್ಚಲಾಗುತ್ತಿತ್ತು. ಈ ಬಾರಿ ಇವೆಲ್ಲದಕ್ಕೂ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಮಧ್ಯರಾತ್ರಿ ಧರ್ಮರಾಯ ಸ್ವಾಮಿ ದೇವಸ್ಥಾನದ ಗರ್ಭಗುಡಿಯಿಂದ ಕರಗ ಹೊರಟು, ನಗರದ ವಿವಿಧೆಡೆ ಸಂಚರಿಸುತ್ತಿತ್ತು. ಇದಕ್ಕಾಗಿ ಲಕ್ಷಾಂತರ ಭಕ್ತರು ಕಾದು ಕುಳಿತುಕೊಳ್ಳುತ್ತಿದ್ದರು. ಆದರೆ ಸಾಮಾಜಿಕ ಜಲತಾಣದಲ್ಲಿನ ಕೆಲ ಫೋಟೋ, ವಿಡಿಯೋ ನೋಡಿಯೇ ಕಣ್ಣುತುಂಬಿಕೊಳ್ಳಬೇಕಾದ ದುಸ್ಥಿತಿ ಸಿಲಿಕಾನ್ ಸಿಟಿ ಜನರಿಗೆ ಎದುರಾಗಿದೆ.