ಬೆಂಗಳೂರು: ಕನ್ನಡಿಗರು ಎಲ್ಲರನ್ನೂ ನಮ್ಮವರು ಎಂದು ಒಪ್ಪಿಕೊಳ್ಳುತ್ತಾರೆ. ಬೇರೆ ಬೇರೆ ಸಮುದಾಯಗಳಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ. ಅದಕ್ಕೆ ಇಂದು ಬೆಂಗಳೂರಿನಲ್ಲಿ ಅನೇಕ ಮಲೆಯಾಳಿಗಳು ಇದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಕಲಾಕೈರಾಲಿ ಸಂಸ್ಥೆ ಆಯೋಜಿಸಿದ್ದ ಓಣೋತ್ಸವಂ 2022 - ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇರಳ ಅಡ್ವೆಂಚರ್ ನಾಡು. ಕೇರಳಿಗರು ಇಲ್ಲದ ದೇಶವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಎಲ್ಲಾ ಕಡೆ ನೆಲೆಸಿದ್ದಾರೆ. ಕೇರಳಿಗರು ಎಲ್ಲಿಯೇ ಹೋದರೂ ಅಲ್ಲಿನ ಸಂಸ್ಕೃತಿಯ ಜೊತೆ ಬೆರೆತು ಹೋಗುತ್ತಾರೆ. ಆದರೂ ಕೂಡ ತಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳುವುದಿಲ್ಲ. ಅಲ್ಲದೆ ಅವರು ಸಾಕಷ್ಟು ಬುದ್ಧಿವಂತರು ಮತ್ತು ಪರಿಶ್ರಮಜೀವಿಗಳು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೇರಳದ ಜನತೆ ಹೆಚ್ಚಾಗಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಕೇರಳದ ಜನತೆಯ ಕೊಡುಗೆಯನ್ನು ಮರೆಯೋದಕ್ಕೆ ಸಾಧ್ಯವಿಲ್ಲ ಎಂದರು.
ನೀವು ಎಲ್ಲೇ ಹೋದರೂ ಕೂಡ ಅಭಿವೃದ್ಧಿಯನ್ನು ತೆಗೆದುಕೊಂಡು ಹೋಗುತ್ತೀರ. ಕೇರಳ ಮತ್ತು ಕರ್ನಾಟಕ ಸೋದರತ್ವ ಸಂಬಂಧ ಹೊಂದಿದೆ. ಕೇರಳ ಸಿಎಂ ಮೊನ್ನೆ ನನ್ನನ್ನು ಭೇಟಿ ಮಾಡಿದ್ದರು. ಕೇರಳದ ಜೊತೆಗೆ ನಮಗೆ ಅತ್ಯುತ್ತಮ ಸಂಬಂಧವಿದೆ. ಕನ್ನಡಿಗರು ಎಲ್ಲರನ್ನೂ ನಮ್ಮವರು ಎಂದು ಒಪ್ಪಿಕೊಳ್ಳುತ್ತಾರೆ. ಬೇರೆ ಬೇರೆ ಸಮುದಾಯಗಳಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತಾರೆ ಅದಕ್ಕೆ ಇಂದು ಬೆಂಗಳೂರಿನಲ್ಲಿ ಅನೇಕ ಮಲೆಯಾಳಿಗಳು ಇದ್ದಾರೆ. ಕೇರಳಕ್ಕಿಂತ ಬೆಂಗಳೂರು ಅನೇಕ ಕೇರಳಿಗರಿಗೆ ಇಷ್ಟವಾದ ಸ್ಥಳವಾಗಿದೆ ಎಂದು ಅಭಿಪ್ರಾಯಪಟ್ಟರು.
ಹಸಿರು, ಸಂಸ್ಕೃತಿ, ಅರಣ್ಯ ಸಂಪತ್ತು ಎಲ್ಲವನ್ನೂ ಉಳಿಸಿಕೊಳ್ಳಲು ಒಟ್ಟಾಗಿ ಕೆಲಸ ಮಾಡಬೇಕಿದೆ. ಭಾರತದ ಅಭಿವೃದ್ಧಿಗೆ ಕೇರಳ ಅನೇಕ ಕೊಡುಗೆ ನೀಡಿದೆ. ಶ್ರೀಮಂತ ಸಂಸ್ಕೃತಿಯನ್ನು ಕೇರಳ ಹೊಂದಿದೆ ಎಂದು ಎಲ್ಲರಿಗೂ ಶುಭಾಶಯ ಕೋರುತ್ತಾ ಕಲಾಕೈರುಳಿ ಸಂಘ 50 ವರ್ಷ ಪೂರೈಸಲಿ. ಸ್ಥಳೀಯತೆಯ ಜೊತೆ ಬೆಸೆದುಕೊಳ್ಳುವುದರ ಜೊತೆ ನಿಮ್ಮ ಸಂಸ್ಕೃತಿಯನ್ನು ಕೂಡ ಕಳೆದುಕೊಳ್ಳಬೇಡಿ ಎಂದು ಸಲಹೆ ನೀಡಿದರು.
(ಇದನ್ನೂ ಓದಿ: ಕೆಲವೇ ದಿನದಲ್ಲಿ ಹೈಕಮಾಂಡ್ ಅನುಮತಿ ಪಡೆದು ಸಂಪುಟ ವಿಸ್ತರಣೆ ಮಾಡುತ್ತೇವೆ: ಸಿಎಂ ಬೊಮ್ಮಾಯಿ)