ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ' ನೀಡಲು ಸಿಎಂ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿ ಸಭೆ ಅಕ್ಬೋಬರ್ 25 ರಂದು ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ಸಲಹಾ ಸಮಿತಿ ರಚಿಸಲಾಗಿದ್ದು, ಈಗಾಗಲೇ ಸಲ್ಲಿಕೆಯಾಗಿರುವ ರಾಜ್ಯೋತ್ಸವ ಪ್ರಶಸ್ತಿ ಆಕಾಂಕ್ಷಿಗಳ ಅರ್ಜಿ, ಶಿಫಾರಸು ಪತ್ರಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಈ ಬಾರಿ 64 ಮಂದಿಗೆ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಪ್ರಶಸ್ತಿಗೆ ಸಂಬಂಧಿಸಿದಂತೆ ಈಗಾಗಲೇ ಸಾವಿರಾರು ಅರ್ಜಿಗಳು ಬಂದಿದ್ದು, ಸಲಹಾ ಸಮಿತಿ ಅರ್ಜಿಗಳನ್ನು ಸಂಕ್ಷಿಪ್ತಗೊಳಿಸಿ ಆಯ್ಕೆ ಸಮಿತಿ ಮುಂದೆ ಮಂಡಿಸಲಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಸಿ.ಎನ್.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಸಚಿವರಾದ ಆರ್.ಅಶೋಕ್, ಸಿ.ಟಿ.ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ, ನಿರ್ದೇಶಕರು ಸೇರಿದಂತೆ ಇತರರು ಆಯ್ಕೆ ಸಮಿತಿಯಲ್ಲಿದ್ದಾರೆ.
ಈ ಸಮಿತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.