ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ 2020ನೇ ಸಾಲಿನ ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನಗಳನ್ನು ಪ್ರಕಟಿಸಿದೆ. ಪ್ರಾಧಿಕಾರದ ಅಧ್ಯಕ್ಷ ಎಂ.ಎನ್. ನಂದೀಶ್ ಹಂಚೆ ನೇತೃತ್ವದಲ್ಲಿ ಈ ಬಹುಮಾನಗಳಿಗೆ ಆಯ್ಕೆ ನಡೆದಿದೆ. ಪುಸ್ತಕ ಸೊಗಸು ಮೊದಲ ಬಹುಮಾನವನ್ನು ಡಾ.ಎಸ್. ಗುರುಮೂರ್ತಿ ಕದಂಬರು ಸಮಗ್ರ ಅವಲೋಕನ ಕೃತಿಯನ್ನು ಹೊರತಂದಿರುವ ಬೆಂಗಳೂರಿನ ಭವತಾರಿಣಿ ಪ್ರಕಾಶನ ಪಡೆದಿದೆ.
ದ್ವಿತೀಯ ಬಹುಮಾನವನ್ನು ಡಾ. ಅಮರೇಶ ಯತಗಲ್ರ 'ಸಾರ್ಥಕ ಬದುಕು' ಕೃತಿಗೆ ರಾಯಚೂರಿನ ನ್ಯಾಯಮೂರ್ತಿ ಶಿವರಾಜ ಪಾಟೀಲ ಪ್ರತಿಷ್ಠಾನ ಹಾಗೂ ಮೂರನೇ ಬಹುಮಾನವನ್ನು ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ 'ಕಲಾಸಂಚಯ' ಕೃತಿಗೆ ಉಡುಪಿಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪಡೆದುಕೊಂಡಿವೆ. ಈ ಬಹುಮಾನಗಳು ಕ್ರಮವಾಗಿ 25, 20 ಹಾಗೂ 10 ಸಾವಿರ ನಗದು ಒಳಗೊಂಡಿವೆ.
ಮಕ್ಕಳ ಪುಸ್ತಕ ಸೊಗಸು ಬಹುಮಾನಕ್ಕೆ ತಮ್ಮಣ್ಣ ಬೀಗಾರರ 'ಫ್ರಾಗಿ ಮತ್ತು ಗೆಳೆಯರು' ಕೃತಿಯನ್ನು ಹೊರತಂದಿರುವ ತುಮಕೂರಿನ ಗೋಮಿನಿ ಪ್ರಕಾಶನ ಪಡೆದುಕೊಂಡಿದ್ದು 8 ಸಾವಿರ ನಗದು ಬಹುಮಾನ ಘೋಷಿಸಲಾಗಿದೆ.
ಲಕ್ಷ್ಮೀಕಾಂತ ಮಿರಜಕರ 'ಬಯಲೊಳಗೆ ಬಯಲಾಗಿ' ಕೃತಿಯ ಮುಖಪುಟ ವಿನ್ಯಾಸಕಾರ ಮೈಸೂರಿನ ಕಲಾವಿದ ಟಿಎಫ್ ಹಾದಿಮನಿಗೆ ಮುಖಪುಟ ಚಿತ್ರ ವಿನ್ಯಾಸ ಬಹುಮಾನ ಸಂದಿದೆ. ಮುಖಪುಟ ಚಿತ್ರಕಲೆಯ ಬಹುಮಾನ ರೂಪಾ ಹಾಸನರ ಸಂಪಾದಕತ್ವದ 'ಹೆಣ್ಣೂಳನೋಟ' ಕೃತಿ ಪಡೆದಿದೆ. ಬೆಂಗಳೂರಿನ ಕಲಾವಿದ ಸುಧಾಕರ ದರ್ಬೆ ಮುದ್ರಣ ಸೊಗಸು ಬಹುಮಾನವನ್ನು, ಕಿರಣ್ ಭಟ್ರ 'ರಂಗ ಕೈರಳಿ' ಕೃತಿಗೆ ರೀಗಲ್ ಪ್ರಿಂಟ್ ಸರ್ವೀಸ್ ಆಯ್ಕೆಯಾಗಿದೆ.
ಈ ಪ್ರಶಸ್ತಿಗಳು ಕ್ರಮವಾಗಿ 10 ಸಾವಿರ, 8 ಸಾವಿರ ಹಾಗೂ 5 ಸಾವಿರ ನಗದು ಬಹುಮಾನವನ್ನು ಒಳಗೊಂಡಿವೆ ಎಂದು ಪ್ರಕಟಣೆಯಲ್ಲಿ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ತಿಳಿಸಿದ್ದಾರೆ.