ಬೆಂಗಳೂರು : ಕನಕದಾಸರ 533ನೇ ಜಯಂತ್ಯುತ್ಸವದ ನಿಮಿತ್ತ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಶ್ರೀ ಕನಕ ಗೌರವ, ಕನಕ ಯುವ ಪುರಸ್ಕಾರ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಿಎಂ, ಕವಿ, ದಾರ್ಶನಿಕ ಹಾಗೂ ಸಂತರಾದ ದಾಸ ಶ್ರೇಷ್ಠ ಕನಕದಾಸರು ಹುಟ್ಟಿರುವ ವಿಶೇಷ ದಿನ ಇಂದು. ಕನಕದಾಸರು ಜಾತಿ - ಮತ ಹೊಡೆದಾಟಗಳನ್ನು ಕೊನೆಗೊಳಿಸಿ, ಪರಸ್ಪರ ಸಹಬಾಳ್ವೆಯೆ ಜೀವನ ನಡೆಸಬೇಕು ಎಂಬ ಸಂದೇಶವನ್ನು ಮನುಕುಲಕ್ಕೆ ಸಾರಿದವರು. ಕನಕದಾಸರು ಮೌಢ್ಯ, ಕಂದಾಚಾರ, ಮೂಢನಂಬಿಕೆಗಳ ವಿರುದ್ಧ ಸಮಾಜದಲ್ಲಿ ಸುಧಾರಣೆ ತಂದವರು. ಕನಕದಾಸರು ಎಂದರೆ ನೆನಪಿಗೆ ಬರುವುದು ಹರಿದಾಸ ಸಾಹಿತ್ಯ. ಅವರು ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಇಂತಹ ಮಹಾನ್ ವ್ಯಕ್ತಿಯ ದಾರಿಯಲ್ಲಿ ನಾವೆಲ್ಲ ನಡೆಯಬೇಕು ಎಂದರು.
ಓದಿ : ಕನಕದಾಸರ ಪುತ್ಥಳಿಗೆ ಸಿಎಂ ಪುಷ್ಪಾರ್ಚನೆ: ಹೆಚ್‌ಡಿಡಿ ಶುಭಾಶಯ
ಕಾಗಿನೆಲೆ ಕನಕ ಗುರುಪೀಠದ ತಿಂಥಿಣಿ ಬ್ರಿಡ್ಜ್ ಶಾಖಾ ಮಠದ ಶ್ರೀ ಸಿದ್ದರಾಮನಂದಪುರಿ ಸ್ವಾಮೀಜಿ, ಡಿಸಿಎಂ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಮಾಜಿ ಸಚಿವ ಹೆಚ್.ಎಂ ರೇವಣ್ಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪಗೆ ಕುರುಬ ಸಂಪ್ರದಾಯದಂತೆ ಸನ್ಮಾನಿಸಲಾಯಿತು.