ಬೆಂಗಳೂರು: ಕಲ್ಯಾಣ ಕರ್ನಾಟಕದ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಫೆ. 15ರಂದು ಸಾಂಕೇತಿಕ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಕಲ್ಯಾಣ ಕರ್ನಾಟಕದ ವಿಭಾಗೀಯ ಅಧ್ಯಕ್ಷ ಸುನಿಲ್ ಹುಡುಗಿ, ಸರ್ಕಾರ 1995ರಿಂದ 2015ರವರೆಗಿನ ಎಲ್ಲಾ ಕನ್ನಡ ಶಾಲೆಗಳನ್ನು ವೇತನಾನುದಾನಕ್ಕೊಳಪಡಿಸಬೇಕೆಂದು ಒತ್ತಾಯಿಸಿದ್ದವು. ಹಾಗೆಯೇ 371ಜೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ ಬಳಕೆಯಾಗದೆ ಉಳಿದಿರುವ ನಿಧಿಯನ್ನು ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ಶೈಕ್ಷಣಿಕ ನಿಧಿಯೆಂದು ಘೋಷಿಸಬೇಕು ಎಂದರು.
ನಿಧಿಯನ್ನು ಆ ಭಾಗದ ಶೈಕ್ಷಣಿಕ ಪ್ರಗತಿಗಾಗಿ ಬಳಸಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿದ್ದೆವು. ಆದರೆ ಸರ್ಕಾರ ಹಾಗೂ ಶಿಕ್ಷಣ ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸದೆ ಮೌನ ತಾಳಿದ್ದಾರೆ. ಹೀಗಾಗಿ ಅನಿವಾರ್ಯ ಕಾರಣದಿಂದ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳನ್ನು ಒಂದು ದಿನ ಸಾಂಕೇತಿಕವಾಗಿ ಬಂದ್ ಮಾಡುತ್ತಿರುವುದಾಗಿ ತಿಳಿಸಿದರು.
ಓದಿ: ಮೀಸಲಾತಿ ಹೋರಾಟಗಳಿಂದ ಕಂಗೆಟ್ಟ ಕೇಂದ್ರ.. ಸಂದಿಗ್ಧ ಸ್ಥಿತಿಗೆ ಸಿಲುಕಿಸದಂತೆ ರಾಜ್ಯ ಸರ್ಕಾರಕ್ಕೆ ತಾಕೀತು!?
ಇದಕ್ಕೆ ಬೆಂಬಲವಾಗಿ ಕಲ್ಯಾಣ ಕರ್ನಾಟಕದ ಇಂಗ್ಲಿಷ್ ಮಾಧ್ಯಮ ಶಾಲೆಗಳು ಬಂದ್ಗೆ ಒಪ್ಪಿಗೆ ನೀಡಿವೆ. ಸರ್ಕಾರ ಸ್ಪಂದಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೂಪದ ಧರಣಿ ಮಾಡುತ್ತೇವೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲೂ ಅಧ್ಯಕ್ಷರ ಪಾದಕ್ಕೆ ಮನವಿ ಪತ್ರ ಇಡುವ ಮೂಲಕ ವಿಶಿಷ್ಟ ಹೋರಾಟ ನಡೆಸಲಾಗುವುದು ಎಂದರು.