ಬೆಂಗಳೂರು: ಎಸ್ಟಿ ಮೀಸಲಾತಿಗಾಗಿ ಕುರುಬ ಸಮುದಾಯ ಇಂದು ತನ್ನ ಶಕ್ತಿ ಪ್ರದರ್ಶನ ನಡೆಸಿತು. ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಬೃಹತ್ ಸಮಾವೇಶದ ಮೂಲಕ ಎಸ್ಟಿ ಮೀಸಲಾತಿಗೆ ಹಕ್ಕೊತ್ತಾಯ ಮಾಡಲಾಯಿತು. ಕಂದಾಯ ಸಚಿವ ಆರ್. ಅಶೋಕ್ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿ ಎಸ್ಟಿ ಮೀಸಲಾತಿ ಆಗ್ರಹದ ಮನವಿ ಪತ್ರವನ್ನು ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಆರ್ಎಸ್ಎಸ್ನವರು ಈ ಸಮಾವೇಶಕ್ಕೆ ದುಡ್ಡು ಕೊಟ್ಟಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಮಾತಿನಿಂದ ಕುರುಬರಿಗೆ ನೋವಾಗಿದೆ. ಈ ಮಾತು ಹೇಳಿದವರು ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಸಿದ್ದರಾಮಯ್ಯಗೆ ಪರೋಕ್ಷವಾಗಿ ಸಂದೇಶ ರವಾನಿಸಿದರು.
ನಮ್ಮ ಕೃಷ್ಣ ಕಾಗಿನೆಲೆ ಸ್ವಾಮಿಗಳು ಬಡ ಕುರುಬ ಕುಚೇಲರ ಬಳಿ ಬಂದು ಹಣ ಸಂಗ್ರಹ ಮಾಡಿದ್ದಾರೆ. 75 ವರ್ಷದಿಂದ ಎಸ್ಟಿ ಮೀಸಲಾತಿ ಸಿಕ್ಕಿಲ್ಲ. ಸ್ವಾಮಿಗಳು ಮಲಗಿದ್ದ ಕುರುಬರನ್ನು ಎಬ್ಬಿಸಿದ್ದಾರೆ. ಸೀತೆಯನ್ನು ತರೋದು ಇನ್ನು ಕಷ್ಟ ಅಲ್ಲ. ಸೀತೆಯಲ್ಲಿ ಮೊದಲ ಅಕ್ಷರ ಎಸ್, ಎರಡನೇ ಅಕ್ಷರ ಟಿ. ಈ ಎಸ್ಟಿ ಯನ್ನು ಕಾಗಿನೆಲೆ ಸ್ವಾಮಿಗಳು ಕರೆ ತರುತ್ತಾರೆ ಎಂದರು.
ಕುರುಬರಿಂದ ಮೇಲಕ್ಕೆ ಬಂದವರು ಬರದಿರುವುದು ನೋವಾಗಿದೆ:
ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಕೂಗು ಕೇಳಬೇಕು. ಎರಡೂ ಸರ್ಕಾರಗಳು ಕಣ್ಣು ತೆರೆಯಬೇಕು. ಸ್ವಾತಂತ್ರ್ಯ ಪೂರ್ವದಲ್ಲೂ ಎಸ್ಟಿ ಮೀಸಲಾತಿಗೆ ಸೇರುವ ಈ ಬೇಡಿಕೆ ಇದೆ. ಯಾವ ಕುಲಶಾಸ್ತ್ರ ಅಧ್ಯಯನವೂ ಬೇಕಾಗಿಲ್ಲ. ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು. ಇದು ನಮ್ಮ ಹಕ್ಕೊತ್ತಾಯ ಎಂದು ಎಚ್. ವಿಶ್ವನಾಥ್ ಒತ್ತಾಯಿಸಿದರು.
ಇದು ಯಾರ ವಿರುದ್ಧವೂ ಅಲ್ಲ. ಆದರೆ, ನಮ್ಮಲ್ಲಿ ನೋವು ಇದೆ. ಸಮುದಾಯದಿಂದ ಮೇಲಕ್ಕೆ ಬಂದವರು ಈ ಬೃಹತ್ ಸಮಾವೇಶಕ್ಕೆ ಬರದೇ ಇರೋದು ನೋವಿದೆ. ಸ್ವಾಮಿಗಳನ್ನು ಕಂಡು ಅವರ ಆರೋಗ್ಯ ವಿಚಾರಣೆ ಮಾಡಲೂ ಬಂದಿಲ್ಲ. ಕುರುಬ ಸಮುದಾಯದ ತನು ಮನ ಧನ ಅರ್ಪಣೆ ಮಾಡಿ ಮೇಲಕ್ಕೆ ಬಂದವರು ಕಣ್ಣು ತೆರೆಯಬೇಕು ಎಂದು ಸಿದ್ದರಾಮಯ್ಯ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಸಚಿವ ಆರ್. ಅಶೋಕ್ರಿಂದ ಮನವಿ ಪತ್ರ ಸ್ವೀಕಾರ:
ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಕಂದಾಯ ಸಚಿವ ಆರ್. ಅಶೋಕ್ ಸಮಾವೇಶಕ್ಕೆ ಆಗಮಿಸಿ, ಸ್ವಾಮೀಜಿಗಳಿಂದ ಮನವಿ ಪತ್ರ ಸ್ವೀಕರಿಸಿದರು.
ಇದೇ ವೇಳೆ ಮಾತನಾಡಿದ ಅವರು, ಯಡಿಯೂರಪ್ಪರ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ಮನವಿ ಸ್ವೀಕರಿಸಿ ಬರಲು ಸಿಎಂ ಹೇಳಿದ್ದಾರೆ. ಈ ಹೋರಾಟವನ್ನು ನೋಡಿದ್ದೇನೆ, ನೀವು ನೀಡಿದ ಮನವಿ ಪತ್ರವನ್ನು ಸಿಎಂಗೆ ಸಲ್ಲಿಸುತ್ತೇನೆ. ಸ್ವಾಮೀಜಿಗಳು ಹೇಳಿರುವ ಎಲ್ಲಾ ವಿಚಾರವನ್ನು ಸಿಎಂಗೆ ತಿಳಿಸುತ್ತೇನೆ ಎಂದರು.