ಬೆಂಗಳೂರು: ಕಾಡು ಮಲ್ಲೇಶ್ವರ ಬಳಗದಿಂದ ಇದೇ 12 ರಿಂದ 14 ರವರೆಗೆ ಮೂರು ದಿನಗಳ ಕಾಲ ಮಲ್ಲೇಶ್ವರಂನ ಕಾಡು ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ 6ನೇ ವಿಜೃಂಭಣೆಯ ಕಡಲೆಕಾಯಿ ಪರಿಷೆ ಆಯೋಜಿಸಲಾಗಿದೆ.
ನಗರದ ಜನರಿಗೆ ಗ್ರಾಮೀಣ ಸಂಸ್ಕೃತಿ, ಜೀವನ ಪದ್ಧತಿ ಪರಿಚಯಿಸುವ ಉದ್ದೇಶದಿಂದ ಪ್ರತಿವರ್ಷ ಕಡಲೆಕಾಯಿ ಪರಿಷೆ ಆಯೋಜಿಸುತ್ತಿದ್ದು, ಕಾರ್ತಿಕ ಮಾಸದಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಪರಿಷೆ ನಡೆಯಲಿದೆ ಎಂದು ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ ಕೆ ಶಿವರಾಂ ಮತ್ತು ಸಾಮಾಜಿಕ ಕಾರ್ಯಕರ್ತ ಅನೂಪ್ ಅಯ್ಯಂಗಾರ್, ಕಾಡು ಮಲ್ಲೇಶ್ವರ ದೇವಸ್ಥಾನ ಬಳಗದ ಕಾರ್ಯಕರ್ತ ಚಂದ್ರಶೇಖರ್ ನಾಯ್ಡು ಮಾಹಿತಿ ನೀಡಿದರು.
ಇಂದು ಮಾತನಾಡಿದ ಬಿ ಕೆ ಶಿವರಾಂ ಮಾತನಾಡಿ, ಆಧುನಿಕ ಬದುಕಿನಲ್ಲಿ ಜಾತ್ರೆ, ಸಂತೆ ಕಣ್ಮರೆಯಾಗುತ್ತಿದ್ದು, ಇದರಿಂದ ಕೃಷಿಕರು ಬೆಳೆದ ವಸ್ತುಗಳ ಮಾರಾಟ ಕುಸಿತವಾಗಿದೆ. ಈ ಬಾರಿ ಆಯೋಜಿಸಿರುವ ಪರಿಷೆಯಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ರೈತರಿಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಇದಕ್ಕಾಗಿ 400 ಮಳಿಗೆಗಳಿಗೆ ಅವಕಾಶ ಕಲ್ಪಿಸಿದ್ದು, ರೈತರು ತಾವು ಬೆಳೆದ ಕಡಲೆಕಾಯಿ, ಅವರೆಕಾಯಿ ಮಾರಾಟ ಮಾಡಲು, ಮಂಡ್ಯ ರೈತರಿಗೆ ಬೆಲ್ಲದ ಅಂಗಡಿ ತೆರೆಯಲು, ಎಲ್ಲ ಕೃಷಿ ಉತ್ಪನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಆಂಧ್ರಪ್ರದೇಶದಿಂದ ಎರಡು ಗೂಳಿ: ಅಲೆಮಾರಿ ಜನಾಂಗ ಬೀದಿ ಬದಿ ವ್ಯಾಪಾರಿಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ಎಲ್ಲ ಮಳಿಗೆಗಳು ಉಚಿತವಾಗಿದೆ. 8ನೇ ಕ್ರಾಸ್ ನಿಂದ 16 ನೇ ಕ್ರಾಸ್ ವರೆಗೆ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ತಿಂಡಿ, ತಿನಿಸು ತಯಾರಿಸಲು ಫುಡ್ ಕೋರ್ಟ್ ನಿರ್ಮಿಸಲಾಗುತ್ತಿದೆ. ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಕಡಲೆಕಾಯಿಯಿಂದ ಅಲಂಕಾರ ಮಾಡಲಾಗುತ್ತಿದೆ. ಜೊತೆಗೆ ಆಂಧ್ರ ಪ್ರದೇಶದ ಓಂಗೋಲ್ನಿಂದ ಎರಡು ದೇಶೀಯ ಗೂಳಿಗಳನ್ನು ತರಲಾಗಿದೆ. ಈ ಗೂಳಿಗಳನ್ನು ಕಾಡು ಮಲ್ಲೇಶ್ವರದಲ್ಲಿ ಸಾಕಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಓದಿ: ಬೆಂಗಳೂರು : ಕಡಲೆಕಾಯಿ ಪರಿಷೆಗೆ ಅದ್ಧೂರಿ ಸಿದ್ಧತೆ - ವ್ಯಾಪಾರಿಗಳ ಮುಖದಲ್ಲಿ ಸಂತಸ