ಬೆಂಗಳೂರು: ಅರ್ಹತೆ ನೀಡುವವರೇ, ವಿಶ್ವಾಸ ಕಳೆದುಕೊಂಡರೆ ಯಾರು ಹೊಣೆ ಅನ್ನೋ ಪ್ರಶ್ನೆಯನ್ನ ಕೆ-ಸೆಟ್ ಬರೆದ ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಸೆಪ್ಟೆಂಬರ್ 27ರಂದು ರಾಜ್ಯಾದ್ಯಂತ ನಡೆದ ಕೆ- ಸೆಟ್ ಪರೀಕ್ಷೆಯ ಕೀ ಉತ್ತರಗಳನ್ನು ಕೆಸೆಟ್ ಸಂಸ್ಥೆ ಬಿಡುಗಡೆ ಮಾಡಿದೆ.
ಆದರೆ,ಸಂವಹನ ಮತ್ತು ಪತ್ರಿಕೋದ್ಯಮ ವಿಷಯದ ಕೀ ಉತ್ತರಗಳಲ್ಲಿ ಸರಿ ಸುಮಾರು 30 ಪ್ರಶ್ನೆಗಳ ಕೀ ಉತ್ತರ ತಪ್ಪಾಗಿದ್ದು, ಅಭ್ಯರ್ಥಿಗಳಲ್ಲಿ ಆತಂಕ ಮೂಡಿಸಿದೆ. ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿದ್ದರೂ ಸಹ ಒಂದು ಪ್ರಶ್ನೆಗೆ 1000 ರೂಪಾಯಿ ನಿಗದಿ ಮಾಡಿದೆ. ಅಂದರೆ 30ಸಾವಿರ ರೂಪಾಯಿ ನೀಡಿ ಆಕ್ಷೇಪಣೆ ಸಲ್ಲಿಸಬೇಕಾಗಿದೆ.
ಈಗಾಗಲೇ ಕೊರೊನಾದ ಸಂಕಷ್ಟಕ್ಕೆ ಸಿಲುಕಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಅಭ್ಯರ್ಥಿಗಳು ಅಷ್ಟು ದೊಡ್ಡ ಮೊತ್ತವನ್ನು ಹೇಗೆ ಭರಿಸಲು ಸಾಧ್ಯ? ಅಂತ ಪ್ರಶ್ನೆ ಮಾಡಿದ್ದಾರೆ. ಸಂವಹನ ಮತ್ತು ಪತ್ರಿಕೋದ್ಯಮ ವಿಷಯದ ಬಹುತೇಕ ಪ್ರಶ್ನೆಗಳು ಬಹುಶಿಸ್ತಿನ ಮತ್ತು ಪ್ರಚಲಿತ ವಿದ್ಯಮಾನದ ಆಧಾರದಿಂದ ಆಯ್ಕೆ ಮಾಡಿದ್ದು, ಅವುಗಳ ಉತ್ತರ ಯಾವುದೇ ಪುಸ್ತಕದಲ್ಲಿ ಮುದ್ರಣವಾಗಿರುವುದಿಲ್ಲ. ಹೀಗಾಗಿ, ಇದನ್ನು ಗಮನಿಸಿ ಕೆಸೆಟ್ ಸಂಸ್ಥೆ ಕೀ ಉತ್ತರಗಳ ಮರು ಪರಿಶೀಲಿಸಿ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕಿದೆ. ಇಲ್ಲವಾದರೆ ಅರ್ಹ ಅಭ್ಯರ್ಥಿಗಳ ಬದಲು ಅನರ್ಹ ಅಭ್ಯರ್ಥಿಗಳು ಅರ್ಹತೆ ಪಡೆಯಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.