ಬೆಂಗಳೂರು: ನಗರದ ಕೆರೆಗಳು ನಶಿಸುತ್ತಿರುವುದಕ್ಕೆ ಮತ್ತೊಂದು ತಾಜಾ ಉದಾಹರಣೆ ಕೃಷ್ಣರಾಜಪುರದ ಗಂಗಶೆಟ್ಟಿ ಕೆರೆ. ನಗರದ ಪೂರ್ವ ತಾಲೂಕು ಕಚೇರಿ ಎದುರಿನಲ್ಲೇ ಈ ಕೆರೆ ಇದೆ. ಈಗಿನ ಮಟ್ಟಿಗೆ ಈ ಕೆರೆಯ ವಿಸ್ತೀರ್ಣ 21.27 ಎಕರೆ. ಆದರೆ,ಈ ಹಿಂದೆ ಇದನ್ನು ಗಮನಿಸಿದರೆ 30 ಎಕರೆಗಿಂತ ಹೆಚ್ಚು ವಿಸ್ತಾರವಾಗಿತ್ತು. ಈಗ ಒತ್ತುವರಿಯಾಗಿ 21 ಎಕರೆಗೆ ಬಂದು ನಿಂತಿದೆ.
ಮೂರು ದಶಕಗಳಿಗಿಂತ ಹಿಂದೆ ಈ ಕೆರೆ ಕೆ.ಆರ್.ಪುರ, ದೇವಸಂದ್ರದ ಒಂದು ಭಾಗಕ್ಕೆ ಜಲಮೂಲವಾಗಿತ್ತು.ಈಗ ಕೆರೆಯ ಸುತ್ತಲೂ ಕೋಳಿ ಮಾಂಸದ ತ್ಯಾಜ್ಯ, ಕಟ್ಟಡಗಳ ಅವಶೇಷಗಳನ್ನು ಸುರಿಯಲಾಗುತ್ತಿದೆ. ಇದು ಮಾತ್ರವಲ್ಲದೆ, ಮನೆ ಮನೆಗಳಿಂದ ಸಂಗ್ರಹಿಸಿದ ಕಸವನ್ನು ಅದೇ ಜಾಗದಲ್ಲಿ ಕಸದ ತೊಟ್ಟಿಗಳಾಗಿ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ.
ಸಮರ್ಪಕ ನಿರ್ವಹಣೆಯಿಲ್ಲದೆ ಸೊರಗಿರುವ ಕೆರೆಯಲ್ಲಿ ಕಸ ಯಥೇಚ್ಛವಾಗಿದೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಯಾಗಿರುವ ಕೆರೆಗೆ ಕಲುಷಿತ ನೀರು ಸೇರಿ ದುರ್ನಾತ ಬೀರಲಾರಂಭಿಸಿದೆ, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಸ್ಥಳೀಯರು ಬದುಕು ದೂಡುತ್ತಿದ್ದಾರೆ.
ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವುದನ್ನು ತಡೆಗಟ್ಟಲು ಬಿಬಿಎಂಪಿ ನಿಯೋಜನೆ ಮಾಡಿದ್ದ ಮಾರ್ಷಲ್‌ಗಳು ಈ ಭಾಗದಲ್ಲಿ ಕಾಣುತ್ತಿಲ್ಲ. ಈಗಲೂ ಕೂಡಾ ಕಟ್ಟಡಗಳ ಅವಶೇಷಗಳನ್ನು ರಾತೋರಾತ್ರಿ ಸುರಿಯಲಾಗುತ್ತಿದೆ. ಒಂದು ಕಡೆ ತಾಲೂಕು ಕಚೇರಿ ಎದುರೇ ಇರುವ ಈ ಕೆರೆ ನಶಿಸುತ್ತಿದೆ. ಇನ್ನು ಕೆ.ಆರ್.ಪುರದ ಬಿಬಿಎಂಪಿ ಕಚೇರಿ ಹಿಂಭಾಗದಲ್ಲೇ ಈ ಕೆರೆ ಇದ್ದರೂ, ಆ ಬಗ್ಗೆ ಗಮನಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.