ಬೆಂಗಳೂರು: ಪ್ರತಿಪಕ್ಷವಾಗಿ ಕಾಂಗ್ರೆಸ್ ಈ ರೀತಿ ಮಾಡಬಾರದು. ಈಗ ಕಾಂಗ್ರೆಸ್ ಅಜೆಂಡಾ ನಮಗೆ ಅರ್ಥವಾಗ್ತಿಲ್ಲ ಎಂದು ಜೆಡಿಎಸ್ ಶಾಸಕ ಡಾ. ಕೆ. ಅನ್ನದಾನಿ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿರೋ ವಿಚಾರವಾಗಿ ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಅನ್ನದಾನಿ, ಜನರ ಪರವಾಗಿ ಹಾಗೂ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುವುದಕ್ಕೆ ಅಸೆಂಬ್ಲಿ ಇರೋದು. ನಮ್ಮಂತಹ ಶಾಸಕರ ಸಮಸ್ಯೆ ಕೇಳಿ, ಉತ್ತರ ಪಡೆಯಲಾಗುತ್ತಿಲ್ಲ. ಈ ರೀತಿ ಅಸೆಂಬ್ಲಿ ನಡೆಸಲು ಬಿಡದೇ ಇರೋದು ಬೇಸರದ ಸಂಗತಿ. ಪ್ರಶ್ನೆ ಕೇಳೋದಾದ್ರೆ ಹೊರಗೆ ಬನ್ನಿ, ಅನೇಕ ಕಡೆ ಜಾಗ ಇದೆ ಪ್ರತಿಭಟನೆ ಮಾಡಿ ಎಂದರು.
ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ಇದನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಶಾಸಕರು, ನಾವೂ ಕೂಡ ಚರ್ಚೆ ಮಾಡಬೇಕಿದೆ. ಜೆಡಿಎಸ್ ಎರಡನೇ ಅಧಿಕೃತ ಪ್ರತಿಪಕ್ಷ, ನಮಗೂ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದರು.
ಸೋಮವಾರದಿಂದ ಇದೇ ರೀತಿ ಮುಂದುವರೆದರೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅನ್ನದಾನಿ, ಅವರನ್ನು ಸಸ್ಪೆಂಡ್ ಆದ್ರೂ ಮಾಡಿ, ಏನಾದ್ರೂ ಮಾಡಿ. ಇವರ ವಿರುದ್ಧ ಕ್ರಮ ಕೈಗೊಂಡು, ನಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಿಕೊಡಿ. ನಮಗೂ ಕಾನೂನಾತ್ಮಕವಾಗಿ ಅವಕಾಶ ಮಾಡಿಕೊಡಿ. ಸದನದಲ್ಲಿ ಚರ್ಚೆ ಮಾಡಲು ಅವಕಾಶ ಮಾಡಿಕೊಡಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಮನವಿ ಮಾಡಿದರು.