ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನಿಗದಿ ಸಂಬಂಧ ರಚಿಸಲಾದ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂಗೆ ವರದಿ ಸಲ್ಲಿಸಿತು.
ಪರಿಶಿಷ್ಟ ಜಾತಿಗೆ ಹಾಲಿ ಶೇ.15 ಮೀಸಲಾತಿ ಇದೆ. ಜನಸಂಖ್ಯೆಗೆ ಹೋಲಿಸಿದರೆ ಶೇ.2ರಷ್ಟು ಮೀಸಲಾತಿ ಕಡಿಮೆ ಇದೆ. ಪರಿಶಿಷ್ಟ ಪಂಗಡಕ್ಕೆ ಹಾಲಿ ಶೇ.3 ಮೀಸಲಾತಿ ಇದೆ. ಜನಸಂಖ್ಯೆಗೆ ಅನುಗುಣವಾಗಿ ಶೇ.3 ರಷ್ಟು ಹೆಚ್ಚುವರಿ ಮೀಸಲಾತಿ ನೀಡಬೇಕು ಎಂಬುದು ಸಮುದಾಯದ ಬೇಡಿಕೆಯಾಗಿದೆ.
ಈ ಹಿಂದೆ ಮೈತ್ರಿ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ಗುರಪೀಠದ ಪ್ರಸನ್ನಾನಂದ ಪುರಿ ಶ್ರೀಗಳು, ವಿವಿಧ ಸಂಘಟನೆಗಳು ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿದ್ದವು. ಉದ್ಯೋಗ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿಗೆ ಶೇ.19 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡಿ ಎಂಬ ಒತ್ತಾಯ ಈ ಸಮುದಾಯದವರದ್ದಾಗಿದೆ.
ಈ ಸಂಬಂಧ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಆಯೋಗವನ್ನು ಅಂದಿನ ಸಿಎಂ ಹೆಚ್ ಡಿ ಕುಮಾರಸ್ವಾಮಿ ರಚಿಸಿದ್ದರು. ಇದೀಗ ಆಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ವರದಿ ಸಲ್ಲಿಸಿದೆ.
ಈ ಸಂಬಂಧ ಸುಮಾರು 38 ಸಭೆಗಳನ್ನು ನಡೆಸಲಾಗಿದೆ. 851 ಲಿಖಿತ ಮನವಿಗಳು ಆಯೋಗಕ್ಕೆ ಬಂದಿದ್ದವು. 42 ಇಲಾಖೆ ಮತ್ತು ನಿಗಮಗಳಿಗೆ ಪತ್ರ ಬರೆದು ಮಾಹಿತಿ ಪಡೆಯಲಾಗಿದೆ. ಎಲ್ಲಾ ಅಹವಾಲುಗಳನ್ನು ಪಡೆದ ಬಳಿಕ ಇದೀಗ ಆಯೋಗ ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದೆ.