ಬೆಂಗಳೂರು: ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸುವ ವಿಚಾರ ಸಂಬಂಧ ನ್ಯಾಯಾಲಯದ ನಿರ್ದೇಶನದಂತೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಹೈಕೋರ್ಟ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಉಮೇಶ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾ. ಬಿ. ವಿ. ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಳಿಕ, ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಮತ್ತು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: ಲಾಕ್‌ಡೌನ್ ಸಂದರ್ಭದಲ್ಲಿ ಕಬ್ಬನ್ ಪಾರ್ಕ್ ಒಳಗೆ ವಾಹನ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿತ್ತು. ಇದರಿಂದ ವಾಯು ಮಾಲಿನ್ಯ ಕಡಿಮೆಯಾಗಿ, ಪಾರ್ಕ್ ಒಳಗಿನ ಮಾಲಿನ್ಯ ಕಡಿಮೆಯಾಗಿತ್ತು. ಈ ಹಿನ್ನೆಲೆಯಲ್ಲಿ 2020ರ ಸೆ.2ರಂದು ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಬೇಕು ಎಂದು ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದನ್ನು ಆರು ವಾರದಲ್ಲಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ 2020ರ ಅ.22ರಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿತ್ತು. ಆದರೆ, ಈವರೆಗೂ ನಿರ್ದೇಶನ ಪಾಲಿಸಿಲ್ಲ ಎಂದು ಆರೋಪಿಸಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.