ಬೆಂಗಳೂರು : ನ್ಯಾಯಾಲಯದ ಆದೇಶಗಳನ್ನು ಪಾಲಿಸುವಲ್ಲಿ ವಿಫಲವಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ವನ್ನ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಕನ್‌ಸ್ಟ್ರಕ್ಷನ್ ಕಂಪನಿಯೊಂದಕ್ಕೆ ನೀಡಿದ್ದ ಭರವಸೆಯಂತೆ ನ್ಯಾಯಾಲಯದ ಆದೇಶ ಪಾಲಿಸದ ಬಿಡಿಎ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಲಯದ ಆದೇಶವನ್ನು ಪಾಲಿಸದ ಪ್ರಾಧಿಕಾರದ ವಿರುದ್ಧ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಬಿಡಿಎ ಸೂಕ್ತ ರೀತಿಯಲ್ಲಿ ಕೆಲಸವನ್ನೇ ಮಾಡುತ್ತಿಲ್ಲ. ಹೀಗಾಗಿ, ಜನರು ನ್ಯಾಯಾಲಯಗಳಿಗೆ ಅಲೆಯುತ್ತಿದ್ದಾರೆ. ಕೊನೆಗೆ ನ್ಯಾಯಾಲಯ ನೀಡಿದ ಆದೇಶಗಳನ್ನೂ ಬಿಡಿಎ ಅಧಿಕಾರಿಗಳು ಪಾಲಿಸುತ್ತಿಲ್ಲ. ಬದಲಿಗೆ ಕೋರ್ಟ್ ಆದೇಶ ಜಾರಿಗೂ ಜನರು ಕಚೇರಿಯಿಂದ ಕಚೇರಿಗೆ ಅಲೆಯಬೇಕಿದೆ.
ಹೀಗಾಗಿಯೇ, ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಬಿಡಿಎ ವಿರುದ್ಧವೇ ದಾಖಲಾಗಿವೆ. ಕೋರ್ಟ್ ಹೇಳಿದ ನಂತರವೂ ಕೆಲಸ ಮಾಡಲು ವಿಳಂಬ ಮಾಡುತ್ತಿರುವುದೇಕೆ ಎಂದು ಬಿಡಿಎ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಈ ವೇಳೆ ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರಿದ್ದ ಬಿಡಿಎ ಆಯುಕ್ತ ಎಂ. ಬಿ ರಾಜೇಶ್ ಗೌಡ ಅವರು, ಪೀಠಕ್ಕೆ ವಿವರಣೆ ನೀಡಿದರು. ಬಿಡಿಎ ಆಯುಕ್ತರಾಗಿ ಬಂದು ಎರಡು ತಿಂಗಳಷ್ಟೇ ಆಗಿದೆ. ದಾಖಲೆಗಳನ್ನು ಕಂಪ್ಯೂಟರೀಕರಣ ಮಾಡಿ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ.
ಬಿಡಿಎ ಕಾನೂನು ವಿಭಾಗವನ್ನೂ ಬದಲಾಯಿಸಿದ್ದೇವೆ. ಅಧಿಕಾರಿಗಳ ತಪ್ಪಿನಿಂದಾಗಿ ನ್ಯಾಯಾಲಯಗಳಿಗೆ ಓಡಾಡುವಂತಾಗಿದೆ. ಎಲ್ಲವನ್ನೂ ಸುಧಾರಿಸಲು ತ್ವರಿತ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಬಿಡಿಎ ಜನರ ಕೆಲಸ ಮಾಡುವಲ್ಲಿ ವಿಫಲವಾಗುತ್ತಿದೆ. ಇದರಿಂದಾಗಿಯೇ ಜನ ಸಂಕಷ್ಟಕ್ಕೊಳಗಾಗಿದ್ದು, ಪ್ರಾಧಿಕಾರದ ವಿರುದ್ಧ ಅತಿ ಹೆಚ್ಚು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿವೆ.
ಇದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಶೋಚನೀಯ ಸ್ಥಿತಿಗೆ ನಿದರ್ಶನವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೇ, ನ್ಯಾಯಾಲಯದ ಆದೇಶ ಪಾಲಿಸುವ ಕುರಿತು ಆಗಸ್ಟ್ 23ರೊಳಗೆ ಪ್ರಮಾಣ ಪತ್ರ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ : ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಮಾರೇನಹಳ್ಳಿಯಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆಯಾದ ನಿಖಿಲ್ ಕನ್‌ಸ್ಟ್ರಕ್ಷನ್‌ಗೆ ಸೇರಿದ 37 ಗುಂಟೆ ಭೂಮಿಯನ್ನು ಬಿಡಿಎ ಅನಧಿಕೃತವಾಗಿ ಬಳಸಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಸಂಸ್ಥೆಗೆ ಬದಲಿ ಭೂಮಿ ನೀಡುವುದಾಗಿ ತಿಳಿಸಿತ್ತು.
ಆದರೆ, ಭರವಸೆಯಂತೆ ಭೂಮಿ ಹಂಚಿಕೆ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿಖಿಲ್ ಕನ್‌ಸ್ಟ್ರಕ್ಷನ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಬದಲಿ ಭೂಮಿ ನೀಡುವಂತೆ ಆದೇಶಿಸಿದ ನಂತರವೂ ಬಿಡಿಎ ಭೂಮಿ ಕೊಟ್ಟಿರಲಿಲ್ಲ. ಈ ಹಿನ್ನೆಲೆ ಸಂಸ್ಥೆ ಬಿಡಿಎ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿದೆ.