ಬೆಂಗಳೂರು : ಇಂದಿಯಿಂದ ಜಂಟಿ ಅಧಿವೇಶನ ಪ್ರಾರಂಭವಾಗಲಿದೆ. ಮೊದಲ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜಂಟಿ ಅಧಿವೇಶನ ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಪ್ರಾರಂಭವಾಗಲಿದೆ. ರಾಜ್ಯಪಾಲರ ಭಾಷಣದೊಂದಿಗೆ ಪ್ರಾರಂಭವಾಗಲಿರುವ ಜಂಟಿ ಅಧಿವೇಶನ ಫೆ.25ರವರೆಗೆ ನಡೆಯಲಿದೆ.
ಈ ಬಾರಿಯ ಅಧಿವೇಶನದಲ್ಲಿ ಮಂಡನೆಗಾಗಿ ಎರಡು ವಿಧೇಯಕಗಳು ಸ್ಪೀಕರ್ ಕಚೇರಿಗೆ ತಲುಪಿವೆ. ಕರ್ನಾಟಕ ಸ್ಟ್ಯಾಂಪ್ ವಿಧೇಯಕ ಮತ್ತು ಕರ್ನಾಟಕ ಕ್ರಿಮಿನಲ್ ತಿದ್ದುಪಡಿ ವಿಧೇಯಕ ಮಂಡನೆಯಾಗಲಿದೆ.
ಇದರ ಜೊತೆಗೆ ಪರಿಷತ್‌ನಲ್ಲಿ ಮತಾಂತರ ನಿಷೇಧ ಮಸೂದೆ ಇನ್ನೂ ಅಂಗೀಕಾರವಾಗಿಲ್ಲ. ಅಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ವಿಧೇಯಕ ಮಂಡಿಸಿ ಅಂಗೀಕಾರ ಪಡೆದುಕೊಳ್ಳಲಿದೆ. ಈ ವೇಳೆಯೂ ಜಟಾಪಟಿ ನಡೆಯುವ ನಿರೀಕ್ಷೆ ಇದೆ.
ಉಳಿದಂತೆ ಹಿಜಾಬ್-ಕೇಸರಿ ಶಾಲು ವಿವಾದ ತಾರಕಕ್ಕೇರಿರುವಾಗಲೇ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಲಿದೆ. ಹತ್ತು ದಿನಗಳ ಕಾಲ ನಡೆಯಲಿರುವ ಜಂಟಿ ಅಧಿವೇಶನದಲ್ಲಿ ಹಿಜಾಬ್-ಕೇಸರಿ ಶಾಲು ವಿವಾದ ದೊಡ್ಡ ಸದ್ದು ಮಾಡುವ ಸಾಧ್ಯತೆ ಇದೆ. ನಾಳೆಯಿಂದ ಉಭಯ ಕಲಾಪಗಳಲ್ಲಿ ಜಂಗಿ ಕುಸ್ತಿ ಶುರುವಾಗಲಿದೆ.
ಆಡಳಿತ ಪಕ್ಷ ಬಿಜೆಪಿ ಹಣಿಯಲು ವಿಪಕ್ಷಗಳು ಸಜ್ಜಾಗಿವೆ. ವಿಪಕ್ಷಗಳಿಗೆ ತಿರುಗೇಟು ಕೊಡಲು ಬಿಜೆಪಿಯೂ ರಣತಂತ್ರ ರೂಪಿಸಿದೆ. ಕಾನೂನು ಸುವ್ಯವಸ್ಥೆ ವೈಫಲ್ಯ, ನದಿ ಜೋಡಣೆ, ಮೇಕೆದಾಟು ಯೋಜನೆ, ಬೆಳೆ ವಿಮೆ ಸಮಸ್ಯೆ, ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಮಿತಿ ಹೇರಿರುವುದು ಮತ್ತಿತರ ವಿಚಾರಗಳಲ್ಲಿ ಸದನದ ಒಳಗೆ ಮತ್ತು ಹೊರಗೆ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.
ಜೆಡಿಎಸ್ ತನ್ನ ಶಾಸಕರ ಕ್ಷೇತ್ರಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ. ಜಂಟಿ ಅಧಿವೇಶನದಲ್ಲಿ ಚುನಾವಣಾ ವ್ಯವಸ್ಥೆಯ ಸುಧಾರಣೆಗಳ ಕುರಿತು ಚರ್ಚೆ ನಡೆಸಲು ಚಿಂತಿಸಲಾಗಿದೆ.
ಈ ಬಗ್ಗೆ ಸದನ ಕಾರ್ಯಕಲಾಪ ಸಮಿತಿಯಲ್ಲಿ ಚರ್ಚಿಸಿ, ಈ ವಿಷಯ ಕುರಿತು ಸದನದಲ್ಲಿ ವಿಸ್ತೃತ ಚರ್ಚೆಗೆ ಕಾಲಾವಕಾಶ ಮಾಡಿಕೊಡಲು ಸೂಕ್ತ ದಿನಾಂಕ ಮತ್ತು ಸಮಯವನ್ನು ನಿರ್ಧಾರ ಮಾಡಲಾಗುವುದು. ಈ ಮುಂಚೆ ಇದೇ ವಿಚಾರವಾಗಿ ನಡೆದ ಚರ್ಚೆಗೆ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಬಾರಿಯೂ ಚುನಾವಣಾ ಸುಧಾರಣೆ ವಿಚಾರವಾಗಿ ಮತ್ತೆ ಗದ್ದಲ ಉಂಟಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಹಿಜಾಬ್ ಧರಿಸದಿದ್ರೆ ಮುಸ್ಲಿಂ ಮಹಿಳೆಯರು ಅತ್ಯಾಚಾರಕ್ಕೀಡಾಗುವ ಸಾಧ್ಯತೆ ಇದೆ.. ಜಮೀರ್ ಅಹ್ಮದ್