ಬೆಂಗಳೂರು: ವಿಜಯನಗರ ಜಿಲ್ಲೆಯ ಸಂಡೂರಿನಲ್ಲಿ ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ಮಾಡುವ ವಿಚಾರದಲ್ಲಿ ನ್ಯಾಯಾಲಯದ ಮುಂದಿನ ಆದೇಶದವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರಮಾಣ ಪತ್ರ ಸಲ್ಲಿಸದ ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಜಿಂದಾಲ್ ಸಂಸ್ಥೆಗೆ ಕಡಿಮೆ ಬೆಲೆಯಲ್ಲಿ ಸರ್ಕಾರಿ ಭೂಮಿ ಪರಭಾರೆ ಮಾಡುವ ಸರ್ಕಾರದ ಕ್ರಮಕ್ಕೆ ಆಕ್ಷೇಪಿಸಿ ಬೆಂಗಳೂರಿನ ಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಪ್ರಮಾಣ ಪತ್ರ ಸಲ್ಲಿಸದ ಸರ್ಕಾರದ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿತು.
ನ್ಯಾಯಾಲಯದ ಮುಂದಿನ ಆದೇಶದವರೆಗೆ ಭೂಮಿ ಪರಭಾರೆ ಮಾಡುವುದಿಲ್ಲ ಎಂಬ ಕುರಿತು ಸರ್ಕಾರ ಈವರೆಗೆ ಪ್ರಮಾಣ ಪತ್ರ ಸಲ್ಲಿಸಿಲ್ಲ. ಆದರೆ, ಇದೇ ವೇಳೆ ಖಾಸಗಿ ಸಂಸ್ಥೆಗೆ ನಿಲುವು ಸಮರ್ಥಿಸಿಕೊಳ್ಳಲು ಅವಕಾಶ ನೀಡಿದೆ. ಸರ್ಕಾರದ ಇಂತಹ ನಡವಳಿಕೆಯನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿತು. ಅಲ್ಲದೇ, ನ್ಯಾಯಾಲಯದ ಮುಂದಿನ ಆದೇಶದವರೆಗೆ ಭೂಮಿ ಪರಭಾರೆ ಮಾಡಿಕೊಡುವುದಿಲ್ಲ ಎಂಬ ಕುರಿತು ಸ್ಪಷ್ಟನೆ ನೀಡಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತು.
ಅರ್ಜಿದಾರರ ಆರೋಪ: ವಿಜಯನಗರ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಸುಮಾರು 3,667 ಎಕರೆ ಭೂಮಿಯನ್ನು ಸರ್ಕಾರ ಜಿಂದಾಲ್ ಸಂಸ್ಥೆಗೆ ಪರಭಾರೆ ಮಾಡಿದೆ. 2019ರಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಜಮೀನು ಪರಭಾರೆ ಮಾಡಲು ಮುಂದಾಗಿದ್ದಾಗ ವಿರೋಧ ಪಕ್ಷದಲ್ಲಿದ್ದ ಯಡಿಯೂರಪ್ಪ ನಿರ್ಧಾರವನ್ನು ವಿರೋಧಿಸಿದ್ದರು. ಆದರೆ, ಇದೀಗ ಯಡಿಯೂರಪ್ಪ ಸರ್ಕಾರವೇ ಖಾಸಗಿ ಸಂಸ್ಥೆಗೆ ಜಮೀನು ನೀಡಲು ಮುಂದಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಅಲ್ಲದೆ, ಜಮೀನು ಪರಭಾರೆ ಕುರಿತು 2021ರ ಏಪ್ರಿಲ್ 26ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರ ರದ್ದುಪಡಿಸಬೇಕು. ಜಮೀನು ಪರಭಾರೆ ನಿರ್ಧಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಮೇಲುಸ್ತುವಾರಿಯಲ್ಲಿ ಸ್ವತಂತ್ರ ಸಂಸ್ಥೆಯೊಂದನ್ನು ನೇಮಿಸಬೇಕು. ಆ ಸಂಸ್ಥೆಯಿಂದ ವರದಿ ತರಿಸಿಕೊಳ್ಳಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ: ವಿಧಾನಸೌಧದ ಕಾರಿಡಾರ್ನಲ್ಲಿ ಮಾಧ್ಯಮಕ್ಕೆ ನಿರ್ಬಂಧ ; ಸರ್ಕಾರದಿಂದ ಹೊರಬಿತ್ತು ವಿವಾದಾತ್ಮಕ ಆದೇಶ