ಬೆಂಗಳೂರು: ಯೂಟ್ಯೂಬ್(YouTube) ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಕಳ್ಳತನ ಮಾಡುವ ಬಗ್ಗೆ ತಿಳಿದುಕೊಂಡು ರಾತ್ರೋರಾತ್ರಿ ಆಭರಣ ಅಂಗಡಿಗೆ ಕನ್ನ ಹಾಕಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದ ಆರೋಪಿಗಳನ್ನು ಇಂದಿರಾನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಇಂದಿರಾ ನಗರದ ಸಿಎಂಹೆಚ್ ರಸ್ತೆಯಲ್ಲಿರುವ ಮೀನಾ ಜ್ಯುವೆಲ್ಲರಿ ಶಾಪ್ ಮಾಲೀಕ ಕಿಶನ್ ಸುರನ್ ಎಂಬುವರು ನೀಡಿದ ದೂರಿನ ಮೇರೆಗೆ ಸ್ಯಾಮ್ ಸನ್, ಮಹೇಂದ್ರ ಹಾಗೂ ನೀಲಕಂಠ ಎಂಬವರನ್ನು ಪೊಲೀಸರು ಬಂಧಿಸಿದ್ಧಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಆರೋಪಿಗಳು ಬೆಂಗಳೂರಿನ ಇಂದಿರಾ ನಗರ ಹಾಗೂ ಬೊಮ್ಮನಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆ, ಹೋಟೆಲ್ ವ್ಯವಹಾರದಲ್ಲಿ ನಷ್ಟವಾಗಿತ್ತು. ಚೀನಿ ಆ್ಯಪ್ ಸೇರಿದಂತೆ ಹಲವು ಕಡೆಗಳಲ್ಲಿ ಸಾಲ ಪಡೆದು ತೀರಿಸಲಾಗದೆ, ಸಂಕಷ್ಟಕ್ಕೆ ಸಿಲುಕಿದ್ದರು. ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕೆಂದು ನಿರ್ಧರಿಸಿದ ಆರೋಪಿಗಳು ಕಳ್ಳತನ ಮಾಡಲು ತೀರ್ಮಾನಿಸಿದ್ದರು. ಈ ಹಿನ್ನೆಲೆ ಇಂದಿರಾ ನಗರದ ಸಿಎಂಹೆಚ್ ರಸ್ತೆಯಲ್ಲಿರುವ ಮೀನಾ ಜ್ಯುವೆಲ್ಲರಿ ಶಾಪ್ನಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದರು.
ಯೂಟ್ಯೂಬ್ ನೋಡಿ ಕಳ್ಳತನ
ಕಳ್ಳತನದ ಬಗ್ಗೆ ಗಂಧ-ಗಾಳಿ ಗೊತ್ತಿರದ ಆರೋಪಿಗಳಿಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಜ್ಯುವೆಲ್ಲರಿ ಶಾಪ್ನಲ್ಲಿ ಕಳ್ಳತನ ಮಾಡುವುದು ಹೇಗೆ ? ಅನ್ನೋದನ್ನ ಯ್ಯೂಟ್ಯೂಬ್ ನೋಡಿ ಕಲಿತಿದ್ದರು. ಇದರಂತೆ ಸಕಲ ಸಿದ್ಧತೆ ಮಾಡಿಕೊಂಡ ಆರೋಪಿಗಳು ಇದೇ ತಿಂಗಳ 14 ರಂದು ಕಾರಿನಲ್ಲಿ ಬಂದು ಅಂಗಡಿ ಬೀಗ ಒಡೆದು ಒಳ ನುಗ್ಗಿದ್ದಾರೆ. ಬಳಿಕ 1 ಕೆ.ಜಿ.ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಕಾರಿನ ನೋಂದಣಿ ಸಂಖ್ಯೆ ಕಾಣಿಸದಿರಲು ನಾಮ ಫಲಕಕ್ಕೆ ಮಸಿ ಬಳಿದಿದ್ದರು. ಎಂದಿನಂತೆ ಶಾಪ್ ಮಾಲೀಕ ಬೆಳಗ್ಗೆ ಬಂದು ನೋಡಿದಾಗ ಅಂಗಡಿಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಾಂತ್ರಿಕ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಳ್ಳತನದ ಬಳಿಕ ಆರೋಪಿಗಳು ಗೋವಾಕ್ಕೆ ಎಸ್ಕೇಪ್
ಅಕ್ರಮವಾಗಿ ಹಣ ಸಂಪಾದನೆ ಮಾಡಲು ಕಳ್ಳತನ ಮಾಡಿದ್ದ ಚಿನ್ನಾಭರಣ ಮಾರಾಟ ಮಾಡಲು ಆರೋಪಿಗಳು ಗೋವಾಕ್ಕೆ ತೆರಳಿದ್ದರು. ಆದರೆ, ಅಲ್ಲಿ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಚಿನ್ನ ಕರಗಿಸಲು ನಿರ್ಧರಿಸಿದ್ದರು. ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು ತುಮಕೂರಿನ ಕ್ಯಾತ್ಸಂದ ಬಳಿ ಕಾರಿನಲ್ಲಿ ಬರುವಾಗ ಆರೋಪಿಗಳನ್ನು ಬಂಧಿಸಿದ್ದಾರೆ.