ಬೆಂಗಳೂರು : ವೇತನ ಸಿಗದೆ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಿಕ್ಷಕರಿಗೆ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲು ಮೆರವಣಿಗೆ ಮೂಲಕ ನೂರಾರು ಸಂಖ್ಯೆಯ ಜೆಡಿಯು ಕಾರ್ಯಕರ್ತರು ಸಿಎಂ ಕಚೇರಿ ಎದುರು ಆಗಮಿಸಿದ್ದರು.
ಈ ವೇಳೆ ಕೆಲಕಾಲ ಪೊಲೀಸರೇ ಗಲಿಬಿಲಿಗೊಳ್ಳುವಂತಾಯಿತು. ಬಳಿಕ ಕಾರ್ಯಕರ್ತರು, ಇದು ಮುತ್ತಿಗೆಯಲ್ಲ ಮನವಿ ಕೊಡಲು ಬಂದಿದ್ದೇವೆ ಎಂದ ನಂತರ ಪೊಲೀಸರು ನಿಟ್ಟುಸಿರು ಬಿಡುವಂತಾಯಿತು.
ಕೊರೊನಾ ಲಾಕ್ಡೌನ್ನಿಂದ ಶಿಕ್ಷಕರಿಗೆ ವೇತನ ಇಲ್ಲದಂತಾಗಿದ್ದು, ಖಾಸಗಿ ಶಿಕ್ಷಕರಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲು ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ನೇತೃತ್ವದಲ್ಲಿ ಕಾರ್ಯಕರ್ತರು ಮೆರವಣಿಗೆ ಮೂಲಕ ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದರು. ದೊಡ್ಡ ಸಂಖ್ಯೆಯ ಕಾರ್ಯಕರ್ತರ ನಿಯೋಗ ಕಂಡು, ಪೊಲೀಸರೇ ಭಯಗೊಂಡರು. ಕೂಡಲೇ ಸ್ಥಳಕ್ಕಾಗಮಿಸಿದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಗೃಹ ಕಚೇರಿಗೆ ಪೊಲೀಸ್ ಭದ್ರತೆ ಹೆಚ್ಚಿಸಿದರು.
ಅಲ್ಲದೆ ಮೆರವಣಿಗೆಗೆ ಅನುಮತಿ ಪಡೆಯದೇ ಇದ್ದದ್ದು ಹಾಗೂ ಸಾಮಾಜಿಕ ಅಂತರ ಮರೆತ್ತಿದ್ದರಿಂದ ಗೃಹ ಕಚೇರಿ ಕೃಷ್ಣಾದಿಂದ ಅವರನ್ನು ದೂರ ಕಳುಹಿಸಲಾಯಿತು. ಬಳಿಕ ಕೇವಲ 4 ಜನರಿಗೆ ಮಾತ್ರ ಸಿಎಂ ಭೇಟಿಗೆ ಅವಕಾಶ ಕಲ್ಪಿಕೊಡಲಾಯಿತು. ಈ ಮನವಿ ಸ್ವೀಕರಿಸಿದ ಸಿಎಂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.