ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ಗೆ ನಡೆಯಲಿರುವ ಚುನಾವಣೆಗೆ (Legislative council election) ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿರುವ ಜೆಡಿಎಸ್ (JDS), ಹೊಸಬರಿಗೆ ಅವಕಾಶ ಕೊಡುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಹಾಸನ ಜಿಲ್ಲೆಯಿಂದ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು (H.D.Devegowda) ಅಭ್ಯರ್ಥಿ ಹಾಕುವ ತೀರ್ಮಾನ ಮಾಡಲಿದ್ದು, ಇನ್ನೂ ಅಂತಿಮಗೊಂಡಿಲ್ಲ. ಮೂಲಗಳ ಪ್ರಕಾರ, ಹಾಸನಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹಾಗೂ ಪುತ್ರ ಡಾ.ಸೂರಜ್ ರೇವಣ್ಣ ಅವರ ಹೆಸರುಗಳು ಕೇಳಿ ಬರುತ್ತಿವೆ. ಒಂದು ವೇಳೆ ದೇವೇಗೌಡರ ಕುಟುಂಬದ ಸದಸ್ಯರನ್ನೇ ವಿಧಾನ ಪರಿಷತ್ ಚುನಾವಣಾ ಕಣಕ್ಕಿಳಿಸಲಾಗುತ್ತದೆಯೋ ಅಥವಾ ಬೇರೆಯವರಿಗೆ ಅವಕಾಶ ಮಾಡಿಕೊಡಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
ಕುಮಾರಸ್ವಾಮಿ ನಿರಂತರ ಸಭೆ:
ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹಾಗೂ ಇತರ ನಾಯಕರು ನಿರಂತರ ಸಭೆಗಳನ್ನು ನಡೆಸುತ್ತಿದ್ದು, ಆರು ಸ್ಥಾನಗಳಿಗೆ ನ.15 ರ ಒಳಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.ಈಗಾಗಲೇ ವಿಧಾನಪರಿಷತ್ನ ಜೆಡಿಎಸ್ ಸದಸ್ಯರಾದ ಸಂದೇಶ್ ನಾಗರಾಜ್, ಸಿ.ಆರ್. ಮನೋಹರ್, ಕಾಂತರಾಜ್ ಅವರು ಪಕ್ಷ ತೆರೆಯುವುದು ಬಹುತೇಕ ನಿಶ್ಚಿತ. ಹಾಗಾಗಿ, ಅವರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಪ್ರಬಲ ಅಭ್ಯರ್ಥಿಗಳನ್ನು ಹಾಕಲು ವರಿಷ್ಠರು ನಿರ್ಧರಿಸಿದ್ದಾರೆ.
ಇನ್ನು ಮಂಡ್ಯದಲ್ಲಿ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಎನ್. ಅಪ್ಪಾಜಿಗೌಡ ಅವರಿಗೆ ಮತ್ತೆ ಟಿಕೆಟ್ ನೀಡಲು ಚರ್ಚೆಗಳು ನಡೆಯುತ್ತಿವೆ. ಆದರೆ, ಅಪ್ಪಾಜಿಗೌಡರು ಎಂಎಲ್ಎ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮೈಸೂರಿನಲ್ಲಿ ಸಂದೇಶ್ ನಾಗರಾಜ್ ಬೇರೆ ಪಕ್ಷಕ್ಕೆ ಹೋಗುತ್ತಿರುವುದರಿಂದ ಅಲ್ಲಿಗೆ ಪರ್ಯಾಯ ಅಭ್ಯರ್ಥಿಗೆ ತಲಾಶ್ ಮಾಡಲಾಗುತ್ತಿದೆ.ಅದೇ ರೀತಿ ಕೋಲಾರದಲ್ಲೂ ಸಿ.ಆರ್. ಮನೋಹರ್ ಬದಲಿಗೆ ಹೊಸಬರಿಗೆ ಟಿಕೆಟ್ ನೀಡಲು ಚಿಂತನೆ ನಡೆದಿದೆ.ಇನ್ನು ತುಮಕೂರಿನಲ್ಲಿ ಕಾಂತರಾಜ್ ಬದಲಿಗೆ ಶಾಸಕ ಗೌರಿಶಂಕರ್ ಸಹೋದರ ವೇಣುಗೋಪಾಲ್ ಹೆಸರು ಕೇಳಿ ಬರುತ್ತಿದೆ.
ಕಳೆದ ಮೂರು ದಿನಗಳಿಂದ ಮುಖಂಡರ ಜೊತೆ ಸಮಾಲೋಚನೆ ನಡೆಸುತ್ತಿರುವ ಹೆಚ್.ಡಿ.ಕುಮಾರಸ್ವಾಮಿ ಅವರು, ಜಿಲ್ಲಾವಾರು ಸಭೆಯಲ್ಲೂ ಮುಖಂಡರ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಾಗಿದೆ.