ಬೆಂಗಳೂರು: ಉಪ ಚುನಾವಣೆಗೆ ತಯಾರಾಗುತ್ತಿರುವುದರ ನಡುವೆಯೂ ಮುಂಬರುವ ಜೂನ್‍ನಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಸಜ್ಜಾಗುತ್ತಿದೆ.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಈಗಾಗಲೇ ಒಂದು ಸುತ್ತಿನ ಸಭೆ ನಡೆದಿದೆ. ಇನ್ನು ಒಂದೆರಡು ಸಭೆಗಳನ್ನು ನಡೆಸಲಿರುವ ಗೌಡರು, ನಂತರ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಿದ್ದಾರೆ. ಮೂಲಗಳ ಪ್ರಕಾರ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ಈ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿರುವ ಮಾಜಿ ಉಪ ಸಭಾಪತಿ ಪುಟ್ಟಣ್ಣ ಅವಧಿ ಜೂನ್‍ನಲ್ಲಿ ಮುಗಿಯಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಈಗಿನಿಂದಲೇ ಜೆಡಿಎಸ್ ಚುನಾವಣಾ ಸಿದ್ಧತೆ ಆರಂಭಿಸಿದೆ. ಮಾನಸಿಕವಾಗಿ ಜೆಡಿಎಸ್‍ನಿಂದ ಹೊರಗುಳಿದಿರುವ ಪುಟ್ಟಣ್ಣ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಅದು ಇನ್ನೂ ಖಚಿತವಾಗಿಲ್ಲ.
ರಾಮನಗರದಲ್ಲಿ ಇತ್ತೀಚೆಗೆ ಪುಟ್ಟಣ್ಣ ಅವರು ಜೆಡಿಎಸ್ ತೊರೆಯುವ ಕುರಿತು ಸುಳಿವು ನೀಡಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಬೇಕೆ ಅಥವಾ ಬೇರೆ ರಾಜಕೀಯ ಪಕ್ಷದಿಂದ ಸ್ಪರ್ಧಿಸಬೇಕೆ ಎಂಬ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲವೆಂದು ಹೇಳಿದ್ದಾರೆ. ಈ ಮುನ್ಸೂಚನೆಯನ್ನು ಅರಿತ ಜೆಡಿಎಸ್ ವರಿಷ್ಠರು, ಎ.ಪಿ.ರಂಗನಾಥ್ ಅವರಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಹಿನ್ನೆಲೆ ರಂಗನಾಥ್ ಬೆಂಗಳೂರು ಶಿಕ್ಷಕ ಕ್ಷೇತ್ರದಿಂದ ಸ್ಪರ್ಧಿಸಲು ಅಣಿಯಾಗುತ್ತಿದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ಒಳಗೊಂಡಿರುವ ಈ ಕ್ಷೇತ್ರಕ್ಕೆ 2020ರ ಜೂನ್‍ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.