ಬೆಂಗಳೂರು: ಮಾಜಿ ಪ್ರಧಾನಿ ದೇವೆಗೌಡರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ಜೆಡಿಎಸ್ ಮುಖಂಡರು ಭಾಗವಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಜೆಡಿಎಸ್ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಘೋಷಣೆ ಕೂಗುತ್ತ ಜೆಪಿ ಭವನದಿಂದ ಫ್ರೀಡಂ ಪಾರ್ಕ್ವರೆಗೂ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೂ ಮುನ್ನ ಜೆಪಿ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಪ್ರಧಾನಿ ದೇವೇಗೌಡರು, ಗೌರವಾನ್ವಿತ ಮುಖ್ಯಮಂತ್ರಿಗಳು ನೆರೆಪರಿಹಾರಕ್ಕೆ 35 ಸಾವಿರ ಕೋಟಿ ಕೇಳಿದ್ರು, ಆದರೆ ಕೇಂದ್ರ ಸರ್ಕಾರ 1,200 ಕೋಟಿ ಮಾತ್ರ ಕೊಟ್ಟಿದೆ. ಅಲ್ಲದೇ, ಮೈತ್ರಿ ಸರ್ಕಾರ ಜೆಡಿಎಸ್ ಶಾಸಕರುಗಳ ಕ್ಷೇತ್ರಗಳಿಗೆ ನೀಡಿದ್ದ ಅನುದಾನವನ್ನು ಸಂಪೂರ್ಣವಾಗಿ ರದ್ದುಮಾಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧವೂ ಕಿಡಿಕಾರಿದರು.
ಅಧಿವೇಶನದೊಳಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಅತ್ಯಂತ ಹೇಯವಾದ ಕೃತ್ಯ. ಪ್ರಜಾಪ್ರಭುತ್ವದಲ್ಲಿ ಇದೆಲ್ಲ ಸರಿಯಲ್ಲ ಎಂದು ದೇವೆಗೌಡರು ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮಾಜಿ ಡಿಸಿಎಂ ಪರಮೇಶ್ವರ್ ಅವರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೌಡರು ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.