ಬೆಂಗಳೂರು : ಅನರ್ಹ ಶಾಸಕರು ಗೆದ್ದರೆ ಪ್ರಜಾಪ್ರಭುತ್ವದ ಅಣಕ ಶುರುವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಖಾಸಗಿ ಹೋಟೆಲ್ನಲ್ಲಿ ಇಂದು ಸಂಜೆ ಜೆಡಿಎಸ್ನ ಅನೌಪಚಾರಿಕ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಅನರ್ಹರನ್ನು ಆಯ್ಕೆ ಮಾಡುವ ಕುರಿತು ಜನರಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ಉಪಚುನಾವಣೆಗೆ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದೇವೆ. ಇನ್ನು, ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಬೆಳಗಾವಿ ಮೊದಲಿನಿಂದಲೂ ಜೆಡಿಎಸ್ ಭದ್ರಕೋಟೆ. ಆ ಭದ್ರಕೋಟೆಯನ್ನು ಮತ್ತೆ ಕಟ್ಟೋದಕ್ಕೆ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ಡಿಸೆಂಬರ್ 9ರ ನಂತರ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದರು.
ಹುಣಸೂರಿನಲ್ಲಿ ಏನಾಗುತ್ತಿದೆ ಎಂಬುದು ಗೊತ್ತಿದೆ. ಅಥಣಿಯಲ್ಲಿ ನಮ್ಮ ಅಭ್ಯರ್ಥಿ ಮೂಲತಃ ಜೆಡಿಎಸ್‌ನವರೇ. ಲಕ್ಷ್ಮಣ ಸವದಿಯವರೂ ನಮ್ಮ ಅಭ್ಯರ್ಥಿ ಮೇಲೆ ಒತ್ತಡ ಹಾಕಬಹುದು. ಅಥಣಿಗೂ ಹಾಗೂ ಹಿರೇಕೆರೂರಿನ ಪರಿಸ್ಥಿತಿಗೂ ವ್ಯತ್ಯಾಸವಿದೆ. ಉಪಚುನಾವಣೆಯಲ್ಲಿ ಜೆಡಿಎಸ್ ಹದಿನಾಲ್ಕು ಕ್ಷೇತ್ರಗಳನ್ನೂ ಗಂಭೀರವಾಗಿಯೇ ಪರಿಗಣಿಸಿದೆ. ಹಿರೇಕೆರೂರಿನಲ್ಲಿ ಸ್ವಲ್ಪ ಬದಲಾವಣೆಯಾಗಬಹುದು. ಕಾಂಗ್ರೆಸ್ ಮತ್ತು ಜೆಡಿಎಸ್ ಈ ಚುನಾವಣೆಯಲ್ಲಿ ಒಟ್ಟಾಗಿ ಹೋಗುವುದರ ಪರಿಣಾಮವಾಗಿ ಲೋಕಸಭೆ ಚುನಾವಣೆಯಲ್ಲಿ ಗೊತ್ತಾಗಿದೆ. ಕಾಂಗ್ರೆಸ್ ಗೆಲ್ಲದಿದ್ದರೂ ತೊಂದರೆಯಿಲ್ಲ ಜೆಡಿಎಸ್ ಮಾತ್ರ ಗೆಲ್ಲಬಾರದು ಅನ್ನುವ ತೀರ್ಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಸಾಕಷ್ಟು ದೊಡ್ಡ ಮಠಾಧೀಶರು ಒತ್ತಡ ಹೇರಿದ್ದಾರೆ ಅನ್ನೋದು ಗೊತ್ತಿದೆ. ಹಿರೇಕೆರೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶಿವಾಚಾರ್ಯ ಶ್ರೀಗಳಿಗೆ ನಾನೇ ಕರೆ ಮಾಡಿ ಮನವಿ ಮಾಡಿದ್ದೇನೆ. ಧರ್ಮ ಒಡೆಯುವ ಕೆಲಸಕ್ಕೆ ನಾನು ಪ್ರೇರೇಪಕನಾಗಬಾರದೆಂದು ಚುನಾವಣೆಯಿಂದ ಹಿಂದೆ ಸರಿಯುವಂತೆ ಅವರಲ್ಲಿ ಮನವಿ ಮಾಡಿದ್ದೇನೆ. ನಿಮ್ಮ ಪೀಠಕ್ಕೆ ಅಗೌರವ ಉಂಟಾಗಬಾರದು ಅನ್ನುವ ಕಾರಣಕ್ಕೆ ಕಣದಿಂದ ಹಿಂದೆ ಸರಿಯೋದು ಸೂಕ್ತವೆಂದು ನನ್ನ ಅಭಿಪ್ರಾಯ ಎಂದು ಹೇಳಿದ್ದೇನೆ. ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದರು.
ಹೊಸಕೋಟೆಯಲ್ಲಿ ಈಗಾಗಲೇ ಅಲ್ಲಿನ ಜನ ತೀರ್ಮಾನಿಸಿದ್ದಾರೆ. ಅವಶ್ಯಕತೆ ಇದ್ದರೆ ಶರತ್ ಬಚ್ಚೇಗೌಡ ಪರ ಪ್ರಚಾರ ಮಾಡುತ್ತೇನೆ. ಕೆ ಆರ್ ಪೇಟೆ ಪ್ರಕರಣದಲ್ಲಿ ಅವರೇ ಸಿಂಪತಿ ಗಿಟ್ಟಿಸಿಕೊಳ್ಳಲು ಹೀಗೆ ಮಾಡಿರಬಹುದು. ಯಾರೋ ಕಿಡಿಗೇಡಿಗಳು ಮಾಡಿರಬಹುದು, ಮಂಡ್ಯದಲ್ಲಿ ಹೇಗಾಯ್ತು ಆ ರೀತಿ ಮಾಡಲು ಹೊರಟಿದ್ದಾರೆ. ಆದರೆ, ಮಂಡ್ಯ ಜನಕ್ಕೂ ಈಗ ಗೊತ್ತಾಗಿದೆ. ಆ ರೀತಿ ಈ ಬಾರಿ ನಡೆಯಲ್ಲ ಎಂದು ತಿರುಗೇಟು ನೀಡಿದರು.
ಹಣದ ಮದದಲ್ಲಿ ಅನರ್ಹ ಶಾಸಕ ಡಾ. ಸುಧಾಕರ್ ಸವಾಲು ಹಾಕಿದ್ದಾರೆ. ಹಣದಿಂದ ಮತ ಕೊಂಡುಕೊಳ್ಳುತ್ತೇನೆ ಅಂತಾರೆ. ಯಾವ ರೀತಿ ಅವರು ಹಣ ಮಾಡಿದ್ದಾರೆ ಎಂಬುದು ಗೊತ್ತಿದೆ. ಅವರ ದುರಹಂಕಾರಕ್ಕೆ ಚುನಾವಣೆಯ ನಂತರ ಉತ್ತರ ನೀಡುತ್ತೇನೆ ಎಂದು ಹೆಚ್‌ಡಿಕೆ ಕಿಡಿಕಾರಿದರು.
ಇಂದು ಅನೌಪಚಾರಿಕೆ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಪಟ್ಟಿ ಸಿದ್ದ ಮಾಡಿದ್ದೇವೆ. ನ.22ರ ನಂತರ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಎಂದು ಹೇಳಿದರು. ಕೆ.ಪಿ. ಬಚ್ಚೇಗೌಡರ ಸಲಹೆ ಮೇರೆಗೆ ರಾಧಾಕೃಷ್ಣ ಅವರು ನಾಮಪತ್ರ ಸಲ್ಲಿಸಿದ್ದಾರೆ. ರಾಧಾಕೃಷ್ಣ ಅವರ ನಾಮಪತ್ರವನ್ನು ಭರ್ತಿ ಮಾಡಿದ್ದೇ ಬಚ್ಚೇಗೌಡರು ಎಂದರು.