ಬೆಂಗಳೂರು: ಉಪ ಚುನಾವಣೆ ಹಾಗೂ ವಿಧಾನ ಪರಿಷತ್ನ ಚುನಾವಣೆಯ ಸೋಲಿನಿಂದ ಆಘಾತಗೊಂಡಿರುವ ಜೆಡಿಎಸ್, ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಯ ಒಂದು ಸ್ಥಾನಕ್ಕೆ ನಡೆಯಲಿರುವ ಉಪ ಚುನಾವಣೆಯಿಂದ ದೂರ ಉಳಿಯಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಡಿಸೆಂಬರ್ 1ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 11ರಂದು ಅಧಿಸೂಚನೆ ಹೊರಡಿಸಲಾಗಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ನವೆಂಬರ್ 18ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಸಂಖ್ಯಾಬಲದ ಕೊರತೆ ಇರುವ ಕಾರಣ ರಾಜ್ಯಸಭೆ ಉಪ ಚುನಾವಣೆಗೆ ಸ್ಪರ್ಧಿಸದಿರಲು ಜೆಡಿಎಸ್ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಜೊತೆ ಮುನಿಸಿಕೊಂಡಿರುವ ಜೆಡಿಎಸ್ ವರಿಷ್ಠರು, ಆ ಪಕ್ಷದ ಬೆಂಬಲ ಕೋರುವುದು ಅನುಮಾನ. ಹಾಗಾಗಿ ರಾಜ್ಯಸಭೆ ಚುನಾವಣೆಯಲ್ಲಿ ತಟಸ್ಥವಾಗಿರಲು ಜೆಡಿಎಸ್ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಸಭೆ ಉಪ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಇದುವರೆಗೂ ಯಾವುದೇ ರೀತಿಯ ಚರ್ಚೆಗಳು ನಡೆದಿಲ್ಲ. ನಾಮಪತ್ರ ಸಲ್ಲಿಕೆಗೆ ಇನ್ನೂ ನಾಲ್ಕು ದಿನ ಕಾಲಾವಕಾಶವಿರುವುದರಿಂದ ವರಿಷ್ಠರು ಯಾವ ನಿಲುವಿಗೆ ಬರುತ್ತಾರೋ ಎಂಬುದರ ಬಗ್ಗೆ ಕಾದು ನೋಡಬೇಕಿದೆ ಎಂದು ಜೆಡಿಎಸ್ ಉನ್ನತ ಮೂಲಗಳು ಹೇಳಿವೆ.
ಸೋಲಿನ ಪರಾಮರ್ಶೆ :
ಜೆಡಿಎಸ್ ತೆಕ್ಕೆಯಲ್ಲಿದ್ದ ಶಿರಾ ಹಾಗೂ ಬೆಂಗಳೂರು ಶಿಕ್ಷಕರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಗಳನ್ನು ಕೆಳೆದುಕೊಂಡಿದ್ದು, ದೀಪಾವಳಿ ಹಬ್ಬದ ನಂತರ ಪಕ್ಷದ ವರಿಷ್ಠರು, ಮುಖಂಡರ ಸಭೆ ನಡೆಸಿ ಸೋಲಿನ ಪರಾಮರ್ಶೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.