ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯದ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ನೀಡಿರುವಂತಹ ಪ್ಯಾಕೇಜ್ ಸ್ವಾಗತಿಸಿರುವ ವಿಧಾನ ಪರಿಷತ್ ಸದಸ್ಯ ಹಾಗೂ ಕರ್ನಾಟಕ ಜ್ಯುವೆಲರಿ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಟಿ.ಎ.ಶರವಣ, ಕೋವಿಡ್-19ನಿಂದಾಗಿ ವ್ಯಾಪಾರ-ವಹಿವಾಟು ಇಲ್ಲದೇ ಕಷ್ಟದ ಪರಿಸ್ಥಿತಿಯಲ್ಲಿರುವ ಚಿನ್ನ-ಬೆಳ್ಳಿ ಕೆಲಸಗಾರರನ್ನೂ ಪ್ಯಾಕೇಜ್‍ಗೆ ಪರಿಗಣಿಸಬೇಕೆಂದು ಆಗ್ರಹಿಸಿದ್ದಾರೆ.
![JDS MLC Saravana tweet](https://etvbharatimages.akamaized.net/etvbharat/prod-images/kn-bng-06-gold-silver-workers-also-consider-mlc-script-7208083_07052020205423_0705f_1588865063_1105.jpg)
ರಾಜ್ಯ ಸರ್ಕಾರದ ಪ್ಯಾಕೇಜ್ನಿಂದ ಸವಿತಾ ಸಮಾಜ, ರೈತರು, ಚಾಲಕರಿಗೆ ಉಪಯೋಗವಾಗುತ್ತದೆ. ನಿಮ್ಮ ಈ ನಿರ್ಧಾರ ಶ್ಲಾಘನೀಯವಾದುದ್ದು, ನಮ್ಮ ರಾಜ್ಯದಲ್ಲಿ 5 ಲಕ್ಷ ಜನ ಚಿನ್ನ-ಬೆಳ್ಳಿ ಕೆಲಸ ಮಾಡುವಂತಹ ಕಾರ್ಮಿಕರಿದ್ದಾರೆ. ಪ್ರತಿಯೊಂದು ಶುಭ ಸಮಾರಂಭಗಳಿಗೆ ತಾಳಿ, ಕಾಲುಂಗುರ ಸೇರಿದಂತೆ ಹಲವಾರು ವಿನ್ಯಾಸದ ಆಭರಣಗಳನ್ನು ತಯಾರಿಸುವಂತಹ ಲಕ್ಷಾಂತರ ಜನರು ಇಂದು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ರಾಜ್ಯದಲ್ಲಿ ತೆರಿಗೆ ನೀಡುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಜ್ಯುವೆಲರಿ ಕಾರ್ಮಿಕರು ಕೊರೊನಾದಿಂದಾದ ಲಾಕ್ಡೌನ್ನಿಂದ ವ್ಯಾಪಾರ-ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಚಿನ್ನ-ಬೆಳ್ಳಿ ಕೆಲಸಗಾರನ್ನೂ ಕೂಡ ಪರಿಗಣಿಸಬೇಕೆಂದು ಶರವಣ ಟ್ವೀಟ್ ಮೂಲಕ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.