ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದ ನಂತರ ರಾಜ್ಯದಲ್ಲಾದ ರಾಜಕೀಯ ಬದಲಾವಣೆಯಿಂದ ಜೆಡಿಎಸ್ ಸೊರಗಿದೆಯೇ? ಹೌದು, ಹೀಗೊಂದು ವಿಶ್ಲೇಷಣೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
2018 ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಹಾಗಾಗಿ, ಅತಿ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಸರ್ಕಾರ ರಚನೆ ಮಾಡಿತ್ತಾದರೂ, ಬಹುಮತ ಸಾಬೀತುಪಡಿಸುವಲ್ಲಿ ಬಿ.ಎಸ್. ಯಡಿಯೂರಪ್ಪ ವಿಫಲರಾಗಿದ್ದರು. ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸೇರಿ ಸರ್ಕಾರ ರಚನೆ ಮಾಡಿತು. ಅತಿ ಕಡಿಮೆ ಸ್ಥಾನ ಹೊಂದಿದ್ದರೂ ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಆದರೆ ಕೇವಲ ಹದಿನೆಂಟು ತಿಂಗಳು ಮಾತ್ರ ಅಧಿಕಾರ ನಡೆಸಲು ಕುಮಾರಸ್ವಾಮಿ ಅವರಿಗೆ ಸಾಧ್ಯವಾಯಿತು.
ಕುಮಾರಸ್ವಾಮಿ ಅವರ 18 ತಿಂಗಳ ಆಡಳಿತದಲ್ಲಿ ಸ್ವಪಕ್ಷದ ಕೆಲ ಶಾಸಕರು ಹಾಗೂ ಕಾಂಗ್ರೆಸ್ನ ಕೆಲ ಶಾಸಕರಿಂದ ಅಸಮಾಧಾನ ಸ್ಫೋಟಗೊಂಡಿತು. ಈ ಮಧ್ಯೆ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಯಾಗಿ, ಕಾಂಗ್ರೆಸ್- ಜೆಡಿಎಸ್ ನಿಂದ 17 ಮಂದಿ ಶಾಸಕರು ಬಿಜೆಪಿಗೆ ಹಾರಿದರು. ಹಾಗಾಗಿ, ಮೈತ್ರಿ ಸರ್ಕಾರ ಪತನವಾಯಿತು. ಇದೆಲ್ಲಾ ಈಗ ಇತಿಹಾಸ. ಮೈತ್ರಿ ಸರ್ಕಾರವಿದ್ದಾಗ ಜೆಡಿಎಸ್ ಶಾಸಕರಲ್ಲಿ ಇದ್ದ ಹುಮ್ಮಸ್ಸು, ಆತ್ಮವಿಶ್ವಾಸ ಈಗ ಇದ್ದಂತೆ ಕಾಣುತ್ತಿಲ್ಲ. ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರು ಕುಮಾರಸ್ವಾಮಿ ಅವರ ನಡೆಗೆ ಮುನಿಸಿಕೊಂಡು ತಟಸ್ಥರಾಗಿದ್ದು, ಇದೀಗ ಕಾಂಗ್ರೆಸ್ ಸೇರುವುದಾಗಿ ಘೋಷಣೆ ಮಾಡಿದ್ದಾರೆ.
ಇದಕ್ಕೂ ಮುನ್ನ ಜೆಡಿಎಸ್‌ನ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿದ್ದ ಮಧು ಬಂಗಾರಪ್ಪ ಸಹ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಜೆಡಿಎಸ್‌ನಲ್ಲಿ ಹಲವಾರು ಶಾಸಕರು ಹಾಗೂ ಪ್ರಮುಖ ನಾಯಕರು ಸಹ ಪಕ್ಷದ ಚಟುವಟಿಕೆಗಳಿಂದ ದೂರನೇ ಉಳಿದಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಕೆಲವು ಶಾಸಕರು ಬೇರೆ ಪಕ್ಷಗಳ ಕದ ಕಟ್ಟುತ್ತಿರುವುದು ಸುಳ್ಳಲ್ಲ. ಇದರ ಮಧ್ಯೆ ತಳಮಟ್ಟದಿಂದ ಪಕ್ಷ ಸಂಘಟನೆಗೆ ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ.
ಇತ್ತೀಚೆಗೆ ಜಿಲ್ಲಾವಾರು ಸಭೆಗಳನ್ನು ನಡೆಸಿದರೂ, ಆ ಸಭೆಗೂ ಸಹ ಹಲವು ಜಿಲ್ಲೆಗಳ ಶಾಸಕರು, ಮುಖಂಡರು ಗೈರಾಗಿದ್ದರು. ಇದರಿಂದ ಜೆಡಿಎಸ್‌ನಲ್ಲಿ ಸಾಕಷ್ಟು ಅಸಮಾಧಾನ ಇದೆ ಎಂಬುದು ಖಾತ್ರಿಯಾಗಿದೆ. ಅಸಮಾಧಾನದ ಸುಳಿವು ಅರಿತ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಸಹ ಶಮನಕ್ಕೆ ಮುಂದಾಗಿದ್ದು, ಅದು ಎಷ್ಟರಮಟ್ಟಿಗೆ ಯಶಸ್ವಿಯಾಗುವುದು ಎಂಬುದು ಕಾದು ನೋಡಬೇಕು.
ಇದೀಗ ಜಿ.ಟಿ.ದೇವೇಗೌಡ ಘೋಷಣೆ ಮಾಡಿದ ಬೆನ್ನಲ್ಲೇ ಮೈಸೂರು ಜಿಲ್ಲೆಯ ಮತ್ತಿಬ್ಬರು ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಮೇಲೆ ನಿಂತಿದ್ದಾರೆ. ಕಾಂಗ್ರೆಸ್ ಬಾಗಿಲು ತಟ್ಟಿರುವ ಟಿ.ನರಸೀಪುರ ಶಾಸಕ ಅಶ್ವಿನ್ ಹಾಗೂ ಪಿರಿಯಾಪಟ್ಟಣ ಶಾಸಕ ಮಹಾದೇವ್ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ಈಗಾಗಲೇ ಎರಡು ಸುತ್ತಿನ ಚರ್ಚೆಯನ್ನೂ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಈ ಇಬ್ಬರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆ ಇನ್ನೂ ಭರವಸೆ ಸಿಕ್ಕಿಲ್ಲ ಎಂದು ಹೇಳಲಾಗುತ್ತಿದೆ. ಇನ್ನು ಗುಬ್ಬಿ ಶಾಸಕ ಶ್ರೀನಿವಾಸ್ ಸಹ ಕಾಂಗ್ರೆಸ್ ಸೇರಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮಗನ ರಾಜಕೀಯ ಭವಿಷ್ಯಕ್ಕಾಗಿ..
ಮಗನ ರಾಜಕೀಯ ಭವಿಷ್ಯಕ್ಕಾಗಿ 'ಕೈ 'ಹಿಡಿಯಲು ಜಿ.ಟಿ.ದೇವೇಗೌಡ ಅವರು ನಿರ್ಧರಿಸಿದ್ರಾ? ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದಿನ ಚುನಾವಣೆಯಲ್ಲಿ ಹುಣಸೂರು ಹಾಗೂ ಚಾಮುಂಡೇಶ್ವರಿ ಎರಡು ಕ್ಷೇತ್ರಗಳ ಟಿಕೆಟ್ ಬಯಸಿರುವ ಅವರು, ಕಾಂಗ್ರೆಸ್ ನಾಯಕರ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ತನ್ನ ಹಾಗೂ ಪುತ್ರ ಹರೀಶ್ ಗೌಡ ಇಬ್ಬರಿಗೂ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದು, ಕಾಂಗ್ರೆಸ್ ನಾಯಕರಿಂದ ಸ್ಪಷ್ಟ ಭರವಸೆ ಇನ್ನೂ ಬಂದಿಲ್ಲ ಎನ್ನಲಾಗಿದೆ. ಈ ಮಧ್ಯೆ ಮಹಾನಗರ ಪಾಲಿಕೆ, ಜಿಲ್ಲಾ ಹಾಗೂ ತಾಲೂಕು ಪಂಚಾಯತಿ ಚುನಾವಣೆಗಳು ಬರುತ್ತಿವೆ. ಇದರಲ್ಲಿ ಜೆಡಿಎಸ್ ತನ್ನ ಸಾಮರ್ಥ್ಯ ಸಾಬೀತುಪಡಿಸಿದರೆ, 2023 ರ ವಿಧಾನಸಭೆ ಚುನಾವಣೆ ಎದುರಿಸಲು ಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ.