ಬೆಂಗಳೂರು: ಸರ್ಕಾರ ಉಳಿಸಿಕೊಳ್ಳಲು ಸಿಎಂ ಕುಮಾರಸ್ವಾಮಿ ನಾನಾ ತಂತ್ರಗಳನ್ನ ಮಾಡುತ್ತಿದ್ದು, ಸದ್ಯ ಜೆಡಿಎಸ್ನ ಎಲ್ಲ ಶಾಸಕರುಗಳಿಗೆ ಬುಲಾವ್ ನೀಡಿದ್ದಾರೆ.
ಸಿಎಂ ಕರೆ ಹಿನ್ನೆಲೆಯಲ್ಲಿ ತೆನೆ ಪಕ್ಷದ ಎಲ್ಲ ಶಾಸಕರು ತಾಜ್ ವೆಸ್ಟ್ ಎಂಟ್ ಹೋಟೆಲ್ಗೆ ಆಗಮಿಸುತ್ತಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ, ಗುರುಮಿಟ್ಕಲ್ ಶಾಸಕ ನಾಗನಗೌಡ ಕಂದಕೂರ್, ತಾಜ್ ವೆಸ್ಟೆಂಡ್ಗೆ ಆಗಮಿಸಿದ್ದಾರೆ.
ಇಲ್ಲಿಂದಲ್ಲೇ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಡಿಕೇರಿಯ ರೆಸಾರ್ಟ್ಗೆ ಜೆಡಿಎಸ್ ಶಾಸಕರು ತೆರಳಲಿದ್ದಾರೆ. ಮಧ್ಯಾಹ್ನ ಊಟ ಮುಗಿಸಿಕೊಂಡು ಸಂಜೆ ಹೊತ್ತಿಗೆ ಮಡಿಕೇರಿ ರೆಸಾರ್ಟ್ಗೆ ಶಿಫ್ಟ್ ಆಗಲಿದ್ದಾರೆ.
ಸಿಎಂ ತಾಜ್ ವೆಸ್ಟ್ ಎಂಡ್ಗೆ ಬರುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಎಲ್ಲ ಶಾಸಕರು ಸಿಎಂ ಭೇಟಿ ಮಾಡುತ್ತೇವೆ. ರೆಸಾರ್ಟ್ಗೆ ಹೋಗುವ ಬಗ್ಗೆ ಇನ್ನು ತೀರ್ಮಾನ ಆಗಿಲ್ಲ. ಸಿಎಂ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಿನ್ನೆ ಕೆಲ ಶಾಸಕರು ಸಭೆಗೆ ಆಗಮಿಸದ ವಿಚಾರವಾಗಿ ಮಾತಾನಾಡಿದ ಅವರು, ಅವರೆಲ್ಲ ಅನುಮತಿ ಪಡೆದು ಬಂದಿಲ್ಲ. ಅದಕ್ಕೆ ವಿಶೇಷ ಅರ್ಥ ಕಲ್ಪಿಸೋದು ಬೇಡ. ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ.
ಅಲ್ಲದೆ ತಮ್ಮ ಕಾರ್ಯತಂತ್ರಗಳ ಬಗ್ಗೆ ನಾವು ಏನು ಹೇಳೋದಿಲ್ಲ. ಮುಂಬೈಗೆ ಹೋಗಿರೋ ಶಾಸಕರನ್ನ ಸಂಪರ್ಕ ಮಾಡಿಲ್ಲ. ಯಾವ ಸಚಿವರು ಅವರನ್ನ ಕರೆದುಕೊಂಡು ಬರಲು ಹೋಗಿಲ್ಲ ಅಂತ ತಿಳಿಸಿದರು. ಕಾಂಗ್ರೆಸ್ ಸಚಿವರ ರಾಜೀನಾಮೆ ವಿಚಾರ ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮ್ಮ ಪಕ್ಷದಲ್ಲಿ ಸಚಿವರು ರಾಜೀನಾಮೆ ನೀಡೋ ವಿಚಾರ ದೇವೇಗೌಡರು, ಸಿಎಂ ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರೆ ಅಂತ ತಿಳಿಸಿದ್ದಾರೆ.