ಬೆಂಗಳೂರು : ಮೈಸೂರಿನಿಂದ ಪರಿಷತ್ ಚುನಾವಣೆಗೆ ನನ್ನ ಕುಟುಂಬದಿಂದ ಯಾರೂ ನಿಲ್ಲೋದಿಲ್ಲ. ನನ್ನ ಮಗನೂ ಸ್ಪರ್ಧೆ ಮಾಡೋದಿಲ್ಲ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್‌ನಿಂದ ಪರಿಷತ್‌ಗೆ ಸ್ಪರ್ಧೆ ಮಾಡೋದಿಲ್ಲ ಎಂದು ಶಾಸಕ ಜಿ ಟಿ ದೇವೇಗೌಡ ಹೇಳಿದರು.
ನಗರದಲ್ಲಿ ನಡೆದ 68ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ನಾನು ಎರಡೂವರೇ ವರ್ಷಗಳಿಂದ ಜೆಡಿಎಸ್‌ನಿಂದ ದೂರ ಇದ್ದೇನೆ. ಅವರು ನಮ್ಮನ್ನ ಯಾವುದೇ ಕಾರ್ಯಕ್ರಮಕ್ಕೆ ಕರೆದಿಲ್ಲ, ನಾನು ಹೋಗಿಲ್ಲ.
ನನ್ನ ವಿರುದ್ಧವೇ ಈಗ ನಮ್ಮ ಕ್ಷೇತ್ರದಲ್ಲಿ ಅಧ್ಯಕ್ಷನನ್ನ ನೇಮಕ ಮಾಡಿ ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ದೇವೇಗೌಡರು ನನಗೆ ಕರೆ ಮಾಡಿ ಪಕ್ಷ ಬಿಡಬೇಡಿ ಅಂದ್ರು. ನಾನು ಅವರಿಗೆ ಕ್ಷಮಿಸಿ ಅಂತಾ ಹೇಳಿದ್ದೇನೆ. ನಿಖಿಲ್ ಕೂಡ ನನ್ನ ಮನೆಗೆ ಬಂದಿದ್ದರು. ಅವರಿಗೂ ಎಲ್ಲ ವಿಷಯ ವಿವರವಾಗಿ ಹೇಳಿದ್ದೇನೆ ಎಂದರು.
ನನಗೆ ಎರಡು ಬಾರಿ ಕುಮಾರಸ್ವಾಮಿ ಮಂತ್ರಿ ಸ್ಥಾನ ತಪ್ಪಿಸಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಕೇಳಿದ ಮಂತ್ರಿ ಸ್ಥಾನ ಕೊಡಲಿಲ್ಲ. ಹುಣಸೂರು ಉಪ ಚುನಾವಣೆಯಲ್ಲಿ ನಾನು ಜೆಡಿಎಸ್ ನಾಯಕರಿಗೆ ನನ್ನ ಮಗನನ್ನ ನಿಲ್ಲಿಸೋದಿಲ್ಲ ಅಂತಾ ಹೇಳಿದ್ದೇನೆ.
ಕುಮಾರಸ್ವಾಮಿ ಅವರಿಂದ ನನಗೆ ಅನ್ಯಾಯ ಆಗಿದೆ. ಈಗ ನಮ್ಮ ಕುಟುಂಬದಿಂದ ಪರಿಷತ್‌ಗೆ ಸ್ಪರ್ಧೆ ಮಾಡ್ತಾರೆ ಅಂತಾ ಸುದ್ದಿ ಹರಡಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಜೆಡಿಎಸ್‌ನಿಂದ ಸ್ಪರ್ಧೆ ಮಾಡೋದಿಲ್ಲ. ಟಿಕೆಟ್ ಕೊಡೋಕೆ ನಾವು ರೆಡಿ ಇದ್ದೇವೆ, ಅವರು ತಗೊಳ್ಳುತ್ತಿಲ್ಲ ಅಂತಾ ತೋರಿಸೋಕೆ ಸಾ ರಾ ಮಹೇಶ್ ಹೀಗೆ ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತೀರಾ ಅನ್ನೋ ಪ್ರಶ್ನೆಗೆ ಗುಟ್ಟು ಬಿಡದ ಜಿ ಟಿ ದೇವೇಗೌಡ, ಚುನಾವಣೆ ಬಂದ ಸಮಯದಲ್ಲಿ ಕ್ಷೇತ್ರದ ಜನರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇನೆ. ಒಂದು ಸಾರಿ ಜನರನ್ನ ಕೇಳದೆ ಬಿಜೆಪಿಗೆ ಹೋಗಿ ಅನುಭವಿಸಿದ್ದೇನೆ. ಮತ್ತೆ ಆ ತಪ್ಪು ಮಾಡೋದಿಲ್ಲ. ಕ್ಷೇತ್ರದ ಜನರ ಅಭಿಪ್ರಾಯ ಕೇಳಿ ಮುಂದಿನ ತೀರ್ಮಾನ ಮಾಡ್ತೀನಿ ಎಂದರು.
68ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಸಹಕಾರ ಇಲಾಖೆ ಕಚೇರಿಯಲ್ಲಿ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಚಿವರು ಸಹಕಾರ ಪತ್ರಿಕೆ ಬಿಡುಗಡೆ ಮಾಡಿದರು. ಸಹಕಾರ ಮಹಾ ಮಂಡಳಿ ಅಧ್ಯಕ್ಷ ಜಿಟಿ ದೇವೇಗೌಡ, ಮಹಾಮಂಡಳದ ನಿರ್ದೇಶಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.