ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ ಹಾಗೂ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಕಲ್ಪದೊಂದಿಗೆ ಪಕ್ಷ ಸಂಘಟನೆ ವಿಷಯದಲ್ಲಿ ಕೆಲ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಜಿಲ್ಲಾ ಮುಖಂಡರ ಜೊತೆ ಆತ್ಮಾವಲೋಕನ ಸಭೆ ನಡೆಸಿ ಅವರು ಮಾತನಾಡಿದರು.
ಪಕ್ಷದ ಪದಾಧಿಕಾರಿಗಳನ್ನು ಮುಲಾಜಿಲ್ಲದೆ ಬದಲಾವಣೆ ಮಾಡುತ್ತೇವೆ. ಯುವಜನರಿಗೆ ಆದ್ಯತೆ ನೀಡುತ್ತೇವೆ. ಪಕ್ಷ ಕಟ್ಟುವ ಎಲ್ಲಾ ಉತ್ಸಾಹಿಗಳಿಗೆ ಅವಕಾಶ ಕೊಡುತ್ತೇವೆ. ಬದ್ಧತೆಯಿಂದ ಕೆಲಸ ಮಾಡುವವರಿಗೆ ಅವಕಾಶ ನೀಡಲಾಗುವುದು. ಪಕ್ಷದಲ್ಲಿ ಮುಂಬರುವ ಜಿಲ್ಲಾ, ತಾಲೂಕು, ಲೋಕಸಭೆ ಚುನಾವಣೆ ದೃಷ್ಟಿಯಿಂದ ಎಲ್ಲ ಹಂತದಲ್ಲೂ ಬದಲಾವಣೆ ಖಚಿತ ಎಂದರು.
ಮತ್ತೆ ಪಕ್ಷ ಕಟ್ಟುತ್ತೇವೆ: ಪಕ್ಷವನ್ನು ಮತ್ತೆ ಕಟ್ಟುತ್ತೇವೆ. ಎದೆಗುಂದುವ ಪೈಕಿ ನಾವಲ್ಲ. ಬದ್ಧತೆ, ಪಕ್ಷ ಕಟ್ಟುವ ಛಲ, ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ಕೊಡಲಾಗುವುದು. ನಾನು ರಾಜ್ಯದ ಉದ್ದಗಲಕ್ಕೂ ಸಂಚಾರ ಮಾಡುತ್ತೇನೆ. ಜಿಲ್ಲೆಗಳಲ್ಲಿ ಸಭೆ ಮಾಡಿ ಜಿಲ್ಲಾ ಘಟಕಗಳಿಗೆ ಸರಿಯಾದ ಚಿಕಿತ್ಸೆ ಕೊಡಲಾಗುವುದು. ಪಕ್ಷ ಸಂಘಟನೆ ಮಾಡದಿರುವ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾವಣೆ ಮಾಡುತ್ತೇವೆ. ಚುನಾವಣೆಗೆ ಸಮರ್ಥ ಅಭ್ಯರ್ಥಿಗಳನ್ನು ತಯಾರು ಮಾಡಲಾಗದವರನ್ನು ಬದಲಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪಕ್ಷದಲ್ಲಿ ನಾಯಕರಾಗಿ ಬೆಳೆಯುವ ಯುವಜನರಿಗೆ ಅವಕಾಶ ಕೊಡುತ್ತೇವೆ. ಮುಂದಿನ ದಿನಗಳಲ್ಲಿ ಯುವ ಜನರನ್ನು ಪಕ್ಷಕ್ಕೆ ಹೆಚ್ಚು ಹೆಚ್ಚಾಗಿ ಸೇಳೆಯಲಾಗುವುದು ಎಂದ ಅವರು, ಪದಾಧಿಕಾರಿ ಆದಾಕ್ಷಣ, ಶಾಸಕರಾದಕ್ಷಣ, ಮಂತ್ರಿ ಆದಾಕ್ಷಣ ನಾಯಕರಾಗಿ ಬೆಳೆಯಲಾಗದು. ಜನರ ಜತೆ ಇದ್ದು ಹೋರಾಟ ನಡೆಸಿದರೆ ಮಾತ್ರ ನಾಯಕರಾಗುತ್ತೇವೆ ಎಂದು ಜಿಲ್ಲಾಧ್ಯಕ್ಷರುಗಳಿಗೆ ಕಿವಿಮಾತು ಹೇಳಿದರು. ಸಂಘಟನೆ ಬಗ್ಗೆ ನಿರ್ಲಕ್ಷ್ಯ ಸಲ್ಲ, ಅಂಥವರಿಗೆ ಅವಕಾಶ ಇಲ್ಲ. ಎಷ್ಟು ದಿನಾಂತ ಇಂಥವರನ್ನು ಸಹಿಸಿಕೊಳ್ಳುವುದು. ಬದಲಾವಣೆಗೆ ಇದು ಸೂಕ್ತ ಸಮಯ. ಹಿರಿಯರು ಕೂಡ ಕಿರಿಯರಿಗೆ ಅವಕಾಶ ಮಾಡಿಕೊಡಬೇಕು ಎಂದರು.
ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್, ಶಾಸಕರಾದ ನೇಮಿರಾಜ್ ನಾಯಕ್, ರಾಜುಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಸೇರಿದಂತೆ ಆಯಾ ಜಿಲ್ಲೆಗಳ ಅಧ್ಯಕ್ಷರು, ಹಿರಿಯ ನಾಯಕರು, ಶಾಸಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಟ್ಟು, ಕಾಂಗ್ರೆಸ್ ಸಿದ್ದತೆಯ ಕಡೆಗಣನೆ: ಸೋಲಿಗೆ ಕಾರಣ ಕಂಡುಕೊಂಡ ಬಿಜೆಪಿ
ಸೋಲಿನಿಂದ ಯಾರೂ ಧೃತಿಗೆಡಬೇಕಾಗಿಲ್ಲ: ಇದಕ್ಕೂ ಮೊದಲು ಮಾತನಾಡಿದ್ದ ಹೆಚ್.ಡಿ.ಕುಮಾರಸ್ವಾಮಿ, ಚುನಾವಣೆಯಲ್ಲಿ ಪಕ್ಷಕ್ಕಾದ ಹಿನ್ನಡೆ ಬಗ್ಗೆ ಗಂಭೀರ ಚರ್ಚೆ ನಡೆಸಿ, ಸೋಲಿನ ಕಾರಣಗಳನ್ನು ಪ್ರಸ್ತಾಪಿಸಲಾಯಿತು. ಚುನಾವಣೆಯಲ್ಲಾದ ಸೋಲಿನಿಂದ ಯಾರೂ ಧೃತಿಗೆಡಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷ ಸಂಘಟನೆಗೆ ಒತ್ತು ನೀಡಿ ಬಲಗೊಳಿಸಬೇಕು. ಮುಂಬರುವ ಜಿಲ್ಲಾ, ತಾಲ್ಲೂಕು ಹಾಗೂ ನಗರ ಪಾಲಿಕೆ ಚುನಾವಣೆಗಳಿಗೆ ಈಗಿನಿಂದಲೇ ಸಿದ್ಧತೆ ನಡೆಸುವಂತೆ ಪಕ್ಷದ ಸದಸ್ಯರಿಗೆ ಸಲಹೆ ನೀಡಿದರು.