ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ಯಂತ ಅನಾಗರಿಕವಾಗಿ ಒಂದು ವಿಕೃತ ಮನಸ್ಸಿನಿಂದ ದೇವೇಗೌಡರ ಬಗ್ಗೆ ಹೇಳಿಕೆ ನೀಡಿದ್ದು, ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಅದು ದುರಹಂಕಾರದ ಮಾತುಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ನ ಜೆಪಿ ಭವನದಲ್ಲಿ ಇಂದು 'ಜನತಾ ಮಿತ್ರ' ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ, ಕಾಂಗ್ರೆಸ್ ಮುಖಂಡ ರಾಜಣ್ಣ ವಿರುದ್ಧ ಹರಿಹಾಯ್ದರು. ಕಳೆದ 2004ರಲ್ಲಿ ಅವರೇ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಕೊನೆಯ ದಿನ ದೇವೇಗೌಡರು ಹೋಗಿ ಪ್ರಚಾರ ಮಾಡಿದ್ದರು. ಇದರಿಂದಲೇ ಆಗ ಆ ವ್ಯಕ್ತಿ ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಯ್ತು. ಇಲ್ಲದಿದ್ದರೆ ಅವರನ್ನು ಯಾರು ಕೇಳುತ್ತಿದ್ದರು ಎಂದು ಕಿಡಿಕಾರಿದರು.
ರಾಜಣ್ಣನ ಮಾತಿನ ದುರಹಂಕಾರ ಕೇಳಿದ್ದೇನೆ. ನೀನು ಬ್ರಹ್ಮ ಅಲ್ಲ, ನೀನು ಒಬ್ಬ ಹುಲು ಮಾನವ. ದೇವೇಗೌಡರು ಶತಾಯುಷಿಗಳಾಗಿ ನಾಡಿನಲ್ಲಿ ಬದುಕುತ್ತಾರೆ. ಹಲವಾರು ಒತ್ತಡಗಳಿಂದ ತುಮಕೂರಿನಲ್ಲಿ ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದರು. ಅವರನ್ನು ಸೋಲಿಸಲು ಕುತಂತ್ರ ನಡೆಸಿದ್ದು ಇದೇ ರಾಜಣ್ಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸವಾಲು ಹಾಕಿದ ಹೆಚ್‌ಡಿಕೆ: ಇನ್ನೆರಡು ಮೂರು ತಿಂಗಳು ನೋಡಲಿ. ದೇವೇಗೌಡರೇ ಸ್ವತಂತ್ರವಾಗಿ ಓಡಾಡುತ್ತಾರೆ ಎಂದ ಹೆಚ್‌ಡಿಕೆ, ದೇವೇಗೌಡರ ಹಣೆಬರಹ ಬರೆದವರು ಎಲ್ಲರೂ ಹೋಗಿದ್ದಾರೆ. ಕ್ಷಮೆ ಕೇಳಬೇಕು ಅಂತಾ ಹೇಳುವುದಿಲ್ಲ. ದೇವೇಗೌಡರ ಮಗ ನಾನು ಇನ್ನೂ ಬದುಕಿದ್ದೇನೆ. ಮಧುಗಿರಿಗೆ ಬಂದು ತೋರಿಸುತ್ತೇನೆ. ನಾನು ಉತ್ತರ ಕೊಡುವುದಲ್ಲ, ಅಲ್ಲಿನ ಜನರಿಂದಲೇ ಉತ್ತರ ಕೊಡಿಸುತ್ತೇನೆ ಎಂದು ರಾಜಣ್ಣ ವಿರುದ್ಧ ಸವಾಲು ಹಾಕಿದರು.
ಇದನ್ನೂ ಓದಿ: ಕೂರಲು, ಏಳಲು ಆಗಲ್ಲವೆಂದು ಕುಹಕವಾಡಿದವರಿಗೆ ಉತ್ತರ ಕೊಡುತ್ತೇನೆ: ದೇವೇಗೌಡ ತಿರುಗೇಟು