ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಉಂಟಾದ ಭಾರಿ ಹಿನ್ನಡೆ, ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧತೆ ಹಾಗೂ ಆತ್ಮಾವಲೋಕನ ಸಭೆಯನ್ನು ಇಂದು ಜೆಡಿಎಸ್ ನಾಯಕರು ನಡೆಸಿದರು. ಜೆಡಿಎಸ್ ಕಚೇರಿ ಬೆಂಗಳೂರಿನ ಜೆ.ಪಿ. ಭವನದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.
ಚುನಾವಣೆಯಲ್ಲಿ ಪಕ್ಷಕ್ಕಾದ ಹಿನ್ನಡೆ ಬಗ್ಗೆ ಗಂಭೀರ ಚರ್ಚೆ ನಡೆಸಿ, ಸೋಲಿನ ಕಾರಣಗಳನ್ನು ಪ್ರಸ್ತಾಪಿಸಲಾಯಿತು. ಚುನಾವಣೆಯಲ್ಲಾದ ಸೋಲಿನಿಂದ ಯಾರು ಧೃತಿ ಕೆಡಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಇನ್ನಷ್ಟು ಪಕ್ಷ ಸಂಘಟನೆಗೆ ಒತ್ತು ನೀಡಿ ಬಲಗೊಳಿಸಬೇಕು. ಮುಂಬರುವ ಜಿಲ್ಲಾ, ತಾಲ್ಲೂಕು ಹಾಗೂ ನಗರ ಪಾಲಿಕೆ ಚುನಾವಣೆಗಳಿಗೆ ಈಗಿನಿಂದಲೇ ಸಿದ್ಧತೆ ನಡೆಸುವಂತೆ ಕುಮಾರಸ್ವಾಮಿ ಪಕ್ಷದ ಸದಸ್ಯರಿಗೆ ಸಲಹೆ ನೀಡಿದರು.
ಮುಂದಿನ ವರ್ಷ ಲೋಕಸಭಾ ಚುನಾವಣೆ ಇದೆ. ಪಕ್ಷವನ್ನು ಸಜ್ಜುಗೊಳಿಸಲು ನಾವೆಲ್ಲರೂ ಮುಂದಾಗಬೇಕು. ವಿಧಾನಸಭಾ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪಿಗೆ ತಲೆಬಾಗಿ ಎಲ್ಲ ಕ್ಷೇತ್ರಗಳಲ್ಲೂ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸುವ ಕಾರ್ಯ ಆಗಬೇಕು. ಈ ಚುನಾವಣೆಯಲ್ಲಿ ಆಗಿರುವ ಲೋಪಗಳು ಮುಂದಿನ ಜಿಲ್ಲಾ ಅಥವಾ ತಾಲ್ಲೂಕು ಅಥವಾ ಮುಂದಿನ ಲೋಕಸಭಾ ಚುನಾವಣೆಯಲ್ಲೇ ಆಗಲಿ, ಯಾವುದರಲ್ಲೂ ಮರುಕಳಿಸದಂತೆ ಎಚ್ಚರ ವಹಿಸಬೇಕು. ಜನಪರವಾದ ಹೋರಾಟಗಳನ್ನು ರೂಪಿಸಿ ಜನರ ವಿಶ್ವಾಸ ಗಳಿಸಬೇಕು. ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡುವ ಮೂಲಕ ಹೋರಾಟ ಮತ್ತು ಪಕ್ಷ ಸಂಘಟನೆ ಮಾಡಲು ಸದಸ್ಯರಿಗೆ, ಕಾರ್ಯಕರ್ತರಿಗೆ ಸಲಹೆ ನೀಡಿದರು. ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಆಯಾ ಜಿಲ್ಲೆಗಳ ಅಧ್ಯಕ್ಷರು, ಹಿರಿಯ ನಾಯಕರು, ಶಾಸಕರು, ಅಭ್ಯರ್ಥಿಗಳು ಆತ್ಮಾವಲೋಕನ ಸಭೆಯಲ್ಲಿ ಭಾಗಿಯಾಗಿದ್ದರು.
ಆದಿಶ್ ಆರ್. ವಾಲಿ ಕನ್ನಡ ಪ್ರೀತಿಗೆ ಹೆಚ್ಡಿಕೆ ಮೆಚ್ಚುಗೆ: ಇದೇ ಸಂದರ್ಭದಲ್ಲಿ ಲಂಡನ್ ಸಿಟಿ ವಿಶ್ವವಿದ್ಯಾಲಯದಲ್ಲಿ ಘಟಿಕೋತ್ಸವದ ವೇಳೆ ಪದವಿ ಸ್ವೀಕರಿಸಿದ ನಂತರ ಕನ್ನಡ ಧ್ವಜ ಪ್ರದರ್ಶಿಸಿ ಕನ್ನಡ ಅಸ್ಮಿತೆ ಮೆರೆದು ತಾಯ್ನಾಡಿಗೆ ಗೌರವ ಸಲ್ಲಿಸಿದ ಬೀದರ್ ಜಿಲ್ಲೆಯ ವಿದ್ಯಾರ್ಥಿ ಆದಿಶ್ ಆರ್. ವಾಲಿ ಅವರು ಇಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಸೌಜನ್ಯದ ಭೇಟಿ ಮಾಡಿದರು. ಈ ವೇಳೆ ಕನ್ನಡ ಪ್ರೀತಿಯನ್ನು ಮನಸಾರೆ ಶ್ಲಾಘಿಸಿದ ಹೆಚ್.ಡಿ. ಕುಮಾರಸ್ವಾಮಿ, ನಿಮ್ಮ ಮಾತೃಭಾಷಾ ಪ್ರೇಮ ಯುವಜನತೆಗೆ ಮಾದರಿ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡಿದೆ. ಬಿಜೆಪಿ 66 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತರೆ, ಜೆಡಿಎಸ್ ಕಳೆದ ಬಾರಿಯ ಚುನಾವಣೆಗಿಂತಲೂ ಕಡಿಮೆ ಅಂದರೆ ಕೇವಲ 19 ಸ್ಥಾನಗಳನ್ನಷ್ಟೆ ಗೆದ್ದು ಹೀನಾಯ ಸೋಲು ಕಂಡಿತ್ತು.
ಇದನ್ನೂ ಓದಿ: ಬಿಜೆಪಿ ಜೊತೆ ಕೈಜೋಡಿಸದಿರುವ ಒಂದು ಪಕ್ಷವಿದ್ದರೆ ತೋರಿಸಿ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ