ಬೆಂಗಳೂರು: ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರಾದ ಗುಬ್ಬಿ ಶ್ರೀನಿವಾಸ್ ಹಾಗೂ ಕೋಲಾರದ ಶ್ರೀನಿವಾಸ್ ಗೌಡರನ್ನು ಅನರ್ಹಗೊಳಿಸುವಂತೆ ಜೆಡಿಎಸ್ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ದೂರು ನೀಡಿದೆ. ವಿಧಾನಸೌಧದಲ್ಲಿ ಸ್ಪೀಕರ್ ಭೇಟಿ ಮಾಡಿದ ಜೆಡಿಎಸ್ ಮುಖ್ಯ ಸಚೇತಕ ವೆಂಕಟರಾವ್ ನಾಡಗೌಡ, ಇಬ್ಬರನ್ನೂ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.
ದೂರಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ವೆಂಕಟರಾವ್ ನಾಡಗೌಡ, ನಾವು ಇಬ್ಬರು ಶಾಸಕರ ವಿರುದ್ಧ ದೂರು ನೀಡಿದ್ದೇವೆ. ಕಳೆದ ಕೆಲವು ದಿನಗಳಿಂದ ಅವರು ನಮ್ಮ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಶ್ರೀನಿವಾಸಗೌಡರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಬಹಿರಂಗ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಹೀಗಾಗಿ ಎಲ್ಲಾ ದಾಖಲೆಗಳ ಸಮೇತ ದೂರು ನೀಡಲಾಗಿದೆ. ಸ್ಪೀಕರ್ ಕೂಡ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆಂದು ಭರವಸೆ ಕೊಟ್ಟಿದ್ದಾರೆ ಎಂದರು.
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಇಂತಹ ದೂರುಗಳಿಂದ ಏನೂ ಪ್ರಯೋಜನ ಆಗುತ್ತಿಲ್ಲ ಅಂತಾ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ ಅಷ್ಟೇ. ಹಾಗಂತ ಪಕ್ಷದಿಂದ ಏನೂ ಕ್ರಮ ತೆಗೆದುಕೊಂಡಿಲ್ಲ ಎಂಬ ಸಂದೇಶ ಇರಬಾರದಲ್ಲ. ಹಾಗಾಗಿ ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದರು. ಕಳೆದ ತಿಂಗಳು ಗುಬ್ಬಿ ಶಾಸಕ ಶ್ರೀನಿವಾಸ್ ಹಾಗೂ ಕೋಲಾರದ ಶ್ರೀನಿವಾಸ ಗೌಡ ಅವರನ್ನು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಲಾಗಿತ್ತು.
ಇದನ್ನೂ ಓದಿ: ಪಕ್ಷದ ವತಿಯಿಂದ ನಡೆಯುತ್ತಿರುವ ನನ್ನ ಹುಟ್ಟುಹಬ್ಬವನ್ನು ಯಾರೂ ವಿರೋಧಿಸಿಲ್ಲ: ಸಿದ್ದರಾಮಯ್ಯ