ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಾಳೆ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜೆಡಿಎಸ್ ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗಿದ್ದರೆ, ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಬೆಂಬಲ ನೀಡುವಂತೆ ಕಾಂಗ್ರೆಸ್ ಜೆಡಿಎಸ್ ಶಾಸಕರಿಗೆ ಬಹಿರಂಗ ಮನವಿ ಮಾಡಿದೆ. ಇದರಿಂದಾಗಿ ಚುನಾವಣೆಯ ಕಣ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ.
ಕೋಮುವಾದಿ ಬಿಜೆಪಿಯನ್ನು ಸೋಲಿಸಲು ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ. 32 ಮತಗಳನ್ನು ಹೊಂದಿರುವ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಉದ್ಯಮಿಯಾಗಿದ್ದಾರೆ. ಅಪಾರ ಅನುಭವ ಹೊಂದಿರುವ ಅವರಿಗೆ ಬೆಂಬಲ ನೀಡುವ ಅನಿವಾರ್ಯತೆಯೇನು ಎಂಬುದನ್ನು ಸುರ್ಜೇವಾಲಾ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿರುವುದಾಗಿ ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿಸಿದ್ರೂ ಕಾಂಗ್ರೆಸ್ ಗೆಲ್ಲಲ್ಲ: ಹೆಚ್ಡಿಕೆ
ಇತ್ತ, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಜೆಡಿಎಸ್ ಬುಟ್ಟಿಗೆ ಕೈ ಹಾಕಿದ್ದಾರೆ. ಇವತ್ತು ಕೋಮುವಾದ ಮತ್ತು ಜಾತ್ಯಾತೀತತೆಯ ನಡುವೆ ಸಂಘರ್ಷ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲುವಿಗೆ ಮತ ನೀಡುವಂತೆ ಬಹಿರಂಗ ಪತ್ರದ ಮೂಲಕ ಜೆಡಿಎಸ್ ಶಾಸಕರಿಗೆ ಮನವಿ ಮಾಡಿದ್ದಾರೆ.
ಸೋನಿಯಾ ಜೊತೆ ಗೌಡರ ಮಾತು: ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪರಸ್ಪರರ ಗೆಲುವಿಗಾಗಿ ಒಬ್ಬರ ಮೇಲೆ ಒಬ್ಬರು ಒತ್ತಡ ಹೇರುತ್ತಿರುವ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಈ ಹಗ್ಗಜಗ್ಗಾಟ ನಾಳೆ ಬೆಳಗ್ಗೆ ವೇಳೆಗೆ ಯಾವ ಸ್ವರೂಪ ಪಡೆಯುತ್ತದೆ ಎಂಬುವುದು ಚರ್ಚೆಗೆ ಕಾರಣವಾಗಿದೆ. ಇದರ ನಡುವೆಯೇ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಇವತ್ತೂ ಕೂಡ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಜೊತೆ ಮಾತನಾಡಿದ್ದಾರೆ.
ಇತ್ತ, ಪರಿಸ್ಥಿತಿಯನ್ನು ಊಹಿಸಿರುವ ಸೋನಿಯಾ ಗಾಂಧಿ, ಈ ಕ್ಷಣದವರೆಗೂ ಮೌನವಾಗಿದ್ದಾರೆ. ಹೀಗಾಗಿ ನಾಲ್ಕನೇ ಅಭ್ಯರ್ಥಿಯ ಗೆಲುವಿಗಾಗಿ ಉಭಯ ಪಕ್ಷಗಳು ಒಂದಾಗುತ್ತವೆಯೇ? ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಸದ್ಯದ ಪ್ರಕಾರ ರಾಜ್ಯಸಭೆ ಚುನಾವಣೆಯಲ್ಲಿ ಯಾವ ಪವಾಡ ನಡೆಯದೇ ಇದ್ದರೆ, ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲ್ಲುವ ಸಾಧ್ಯತೆ ಹೆಚ್ಚು.
ಒಂದು ವೇಳೆ ಜೆಡಿಎಸ್ ಪಕ್ಷವೇ ಆಗಲಿ, ಕಾಂಗ್ರೆಸ್ ಪಕ್ಷವೇ ಆಗಲಿ, ಕೊನೆಯ ಘಳಿಗೆಯಲ್ಲಿ ತಮ್ಮ ನಿಲುವು ಬದಲಿಸಿದರೆ ನಾಲ್ಕನೇ ಅಭ್ಯರ್ಥಿಯಾಗಿ ಬಿಜೆಪಿಯೇತರ ಶಕ್ತಿಗಳು ಮೇಲೆದ್ದು ನಿಲ್ಲುವುದು ಖಚಿತ. ಆದರೆ ಸದ್ಯದವರೆಗೆ ಇಂತಹ ನಿಲುವು ಬದಲಾಯಿಸುವ ಕುರುಹು ಕಾಂಗ್ರೆಸ್ ಪಾಳೆಯದಲ್ಲೂ ಇಲ್ಲ, ಜೆಡಿಎಸ್ ಪಾಳೆಯದಲ್ಲೂ ಇಲ್ಲ.
ಇದನ್ನೂ ಓದಿ: ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆ, ಆತ್ಮಸಾಕ್ಷಿಯ ಮತ ಮನ್ಸೂರ್ಗೆ ಕೊಡಿ: ಜೆಡಿಎಸ್ ಶಾಸಕರಿಗೆ ಸಿದ್ದು ಪತ್ರ