ಬೆಂಗಳೂರು : 'ನಾವೂ ಸರ್ವೈವಲ್ ಆಗಬೇಕಲ್ಲವೇ' ಎಂಬ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರ ಹೇಳಿಕೆಯ ಗೂಢಾರ್ಥವೇನು, ಒಳ ಮರ್ಮವೇನು? ಅಂತಾ ಹೀಗೊಂದು ಚರ್ಚೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ವಿಧಾನಸಭೆಯಲ್ಲಿ ಇತ್ತೀಚಿಗೆ ಹೆಚ್ಡಿಕೆ ಮಾತನಾಡುತ್ತಿದ್ದ ವೇಳೆ ಪದೇ ಪದೆ ಬಿಜೆಪಿ ಬೆಂಬಲಿಸಿ ಮಾತನಾಡುತ್ತಿದ್ದರು. ಆಗ ಸಿಎಂ ಸಿದ್ದರಾಮಯ್ಯ ಅವರು 'ಏನು ಕುಮಾರಸ್ವಾಮಿ ಅವರೇ ಬಿಜೆಪಿ ಜೊತೆ ಸೇರಿಕೊಂಡಿದ್ದಿರಾ?' ಎಂದು ಕುಟುಕಿದರು. ಆ ವೇಳೆ ನಾವೂ ಸರ್ವೈವಲ್ ಆಗಬೇಕಲ್ಲವೇ ಎಂದು ಮಾರ್ಮಿಕವಾಗಿ ಹೇಳಿದ್ದು, ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ.
ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಅಧಿಕಾರದಲ್ಲಿದ್ದರೂ, ಪ್ರತಿಪಕ್ಷ ಕಾಂಗ್ರೆಸನ್ನೇ ಟಾರ್ಗೆಟ್ ಮಾಡಿ ಪದೇ ಪದೆ ಕುಮಾರಸ್ವಾಮಿ ಅವರು ಮಾತಮಾಡುತ್ತಿದ್ದರು. ಚುನಾವಣೆ ನಂತರ ಅಧಿಕೃತ ಪ್ರತಿಪಕ್ಷ ಬಿಜೆಪಿ ಬೆಂಬಲಿಸಿ ಮಾತನಾಡುತ್ತಿರುವುದು, ಅಲ್ಲದೇ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುತ್ತಿರುವ ಅವರ ಮಾತಿನ ಮರ್ಮವೂ ಕೂಡ ಬಿಜೆಪಿ ಜತೆ ಕೈಜೋಡಿಸಬಹುದು ಎಂಬ ಊಹಾಪೋಹಕ್ಕೆ ರೆಕ್ಕೆಪುಕ್ಕ ಹುಟ್ಟುಹಾಕಿವೆ.
ಮುಂದಿನ ದಿನಗಳಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಒಪ್ಪಿಗೆ ಸೂಚಿಸಿದ್ದಾರೆ ಎಂಬುದು ಇತ್ತೀಚಿಗೆ ಕುಮಾರಸ್ವಾಮಿ ಅವರು ಆಡುತ್ತಿರುವ ಮಾತುಗಳು ಪುಷ್ಠಿ ನೀಡುತ್ತಿದೆ. ಈ ನಡುವೆ ಕುಮಾರಸ್ವಾಮಿ ದೆಹಲಿಗೆ ತೆರಳಿ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಜೆಡಿಎಸ್ ನಡೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.
ಇನ್ನೊಂದೆಡೆ ಎನ್ಡಿಎ ಮೈತ್ರಿಕೂಟವನ್ನು ಬಲಪಡಿಸಲು ಬಿಜೆಪಿ ಮುಂದಾಗಿದೆ. ಹೊಸ ಮಿತ್ರರ ಹುಡುಕಾಟ ನಡೆಸಿರುವ ಬಿಜೆಪಿ ಈ ಮಧ್ಯೆ ಜೆಡಿಎಸ್ಗೆ ಗಾಳ ಹಾಕಿದೆ. 2024ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದರ ನಡುವೆ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಜೆಡಿಎಸ್ ತನ್ನ ಅಸ್ತಿತ್ವ ಕಾಪಾಡಿಕೊಳ್ಳಲು ಮೈತ್ರಿಗೆ ಮುಂದಾಗಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಜೆಡಿಎಸ್ ಗೆದ್ದೇ ಗೆಲ್ಲಬಹುದಾದ ಐದಾರು ಕ್ಷೇತ್ರಗಳನ್ನು ಬಿಟ್ಟುಕೊಟ್ಟು ಉಳಿದೆಡೆ ಬೆಂಬಲ ಪಡೆಯಲು ಬಿಜೆಪಿ ಕೂಡ ಉತ್ಸುಕತೆ ತೋರಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಲೋಕಸಭೆ ಚುನಾವಣೆ ಬಿಜೆಪಿಗೆ ದೊಡ್ಡ ಸವಾಲಾಗಿದೆ. ಮೈತ್ರಿ ಮಾಡಿಕೊಳ್ಳುವುದರಿಂದ ಎರಡೂ ಪಕ್ಷಗಳಿಗೂ ಲಾಭವಾಗಬಹುದು ಎಂಬ ಲೆಕ್ಕಾಚಾರ ಹಾಕಿದೆ. 2019ರಲ್ಲಿ 25 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ ಅಷ್ಟು ಸ್ಥಾನ ಗೆಲ್ಲುವ ಸಾಧ್ಯತೆ ಕಡಿಮೆ ಆಗಿದೆ. ಹೀಗಾಗಿ ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ಕೂಡ ಆಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈ ಬೆಳವಣಿಗೆಯನ್ನು ಬಿಜೆಪಿಯವರಾಗಲಿ, ಜೆಡಿಎಸ್ನವರಾಗಲಿ ಯಾರೂ ಸ್ಪಷ್ಟವಾಗಿ ಅಲ್ಲಗಳೆದಿಲ್ಲ.
ಬಿಜೆಪಿ ಜೊತೆಗಿನ ಮೈತ್ರಿಗೆ ಜೆಡಿಎಸ್ ಈಗಾಗಲೇ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಎಷ್ಟು ಕ್ಷೇತ್ರ ಬಿಟ್ಟುಕೊಡಬೇಕು ಎಂಬುದು ಉಭಯ ಪಕ್ಷಗಳಲ್ಲಿ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿ ದಟ್ಟವಾಗಿ ಕೇಳಿ ಬರುತ್ತಿದೆ.
ಓದಿ: ಸದನದಲ್ಲಿ ವರ್ಗಾವಣೆ ಕಮಿಷನ್ ರೇಟ್ ಕಾರ್ಡ್ ಕಾದಾಟ: ಆರೋಪ ಸುಳ್ಳು ಎಂದ ಸಿಎಂ, ತನಿಖೆಗೆ ಹೆಚ್ಡಿಕೆ ಆಗ್ರಹ