ಬೆಂಗಳೂರು: ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ, ಮಾ. 5 ರಿಂದ ಆಮರಣಾಂತರ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಕೂಡಲ ಸಂಗಮದ ಜಯಮೃತ್ಯುಂಜರ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಾಳೆ ಸಮಾವೇಶ ಮುಗಿಸಿದ ಬಳಿಕ ಮಾ.04 ರವರೆಗೆ ಧರಣಿ ಸತ್ಯಾಗ್ರಹ ನಡೆಸಿ, ಮಾ.05 ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ನಾಳೆ ಅರಮನೆ ಮೈದಾನದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಸಮಾವೇಶ ಹಿನ್ನೆಲೆಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಇಂದು ಪೂರ್ವಭಾವಿ ಸಭೆ ನಡೆಸಿದರು. ಈ ವೇಳೆ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಸಚಿವ ಮುರುಗೇಶ್ ನಿರಾಣಿ, ಮಾಜಿ ಶಾಸಕ ಸಾರ್ವಭೌಮ ಬಗಲಿ, ಸಮಾಜದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ಸಮಾವೇಶಕ್ಕೆ ಬರುವ ವಾಹನಗಳಿಗೆ ಟೋಲ್ ಉಚಿತ: ನಾಳಿನ ಸಮಾವೇಶಕ್ಕೆ ಇತರ ಜಿಲ್ಲೆಗಳಿಂದ ಬರುವ ವಾಹನಗಳಿಗೆ ಟೋಲ್ ಉಚಿತ ಮಾಡಿ ಕೊಡಲಾಗಿದೆ.
ಸಿಎಂಗೆ ಋಣ ತೀರಿಸುವ ಸಮಯ ಬಂದಿದೆ:
ಪೂರ್ವಭಾವಿ ಸಭೆ ಬಳಿಕ ವಚನಾನಂದ ಸ್ವಾಮೀಜಿ ಮಾತನಾಡಿ, ನಾಳೆಯ ಸಮಾವೇಶಕ್ಕೆ ಲಕ್ಷಗಟ್ಟಲೇ ಜನರು ಬರುತ್ತಿದ್ದಾರೆ. 27 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಹೋರಾಟ ನಿರ್ಣಾಯಕ ಹಂತಕ್ಕೆ ಬಂದಿದ್ದು, ಮುಖ್ಯಮಂತ್ರಿಗಳಿಗೆ ಋಣ ತೀರಿಸುವ ಸಂದರ್ಭ ಬಂದಿದೆ. ಮುಖ್ಯಮಂತ್ರಿಗಳು 2ಎ ಮೀಸಲಾತಿ ಕೊಡುವ ಮೂಲಕ ಸಮಾಜದ ಋಣ ತೀರಿಸಲಿ ಎಂದರು.
ಸರ್ಕಾರ ಬೇಡಿಕೆ ಈಡೇರಿಸಲ್ಲ, ಆಗಲ್ಲ ಎಂದು ಹೇಳಿಲ್ಲ. ಸರ್ಕಾರ ಪಂಚಮಸಾಲಿಗಳಿಗೆ ನ್ಯಾಯ ಒದಗಿಸಿಕೊಡುವ ವಿಶ್ವಾಸ ಇದೆ. ನಾವು ಸರ್ಕಾರಕ್ಕೆ ಗಡುವು ಕೊಡಲ್ಲ, ನಮ್ಮ ಸಮುದಾಯದ ಸಚಿವರು, ಶಾಸಕರು ಸರ್ಕಾರದಲ್ಲಿ ಜಾಸ್ತಿ ಜನ ಇದ್ದಾರೆ. ಆದಷ್ಟು ಬೇಗ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಂಡು ಬೇಡಿಕೆ ಈಡೇರಿಸಲಿ ಎಂದರು.
ಸಚಿವರು ಆದೇಶ ಪತ್ರ ತಗೆದುಕೊಂಡು ಬರಲಿ:
ಬಳಿಕ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಸರ್ಕಾರಕ್ಕೆ ಮನವಿ ಕೊಟ್ಟು ಕೊಟ್ಟು ಸಾಕಾಗಿದೆ. ನಾಳೆ ಮನವಿ ಪತ್ರ ಪಡೆಯಲು ಸಚಿವರು ಬರುವ ಅವಶ್ಯಕತೆ ಇಲ್ಲ. ಇದುವರೆಗೆ ಸಾವಿರ ಮನವಿ ಪತ್ರ ಕೊಟ್ಟಿದ್ದೇವೆ. ನಾಳೆ ಬರುವ ಸಚಿವರು ಆದೇಶ ಪತ್ರ ತಗೆದುಕೊಂಡು ಬರಲಿ ಎಂದರು.
ಓದಿ: ಪವಿತ್ರ ರಾಮ ಮಂದಿರ ನಿರ್ಮಾಣಕ್ಕೆ ಪಿಎಫ್ಐ ಹಣ ಬೇಕಿಲ್ಲ: ಸಂಸದೆ ಶೋಭಾ ಕರಂದ್ಲಾಜೆ ಕಿಡಿ
ಗೌಡ ಲಿಂಗಾಯತ ಸ್ವಾಮೀಜಿಗಳಿಂದ 2ಎ ಗೆ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿ, ಗೌಡ ಲಿಂಗಾಯತ ಸಮುದಾಯದವರು ನಮ್ಮ ಸಹೋದರರು. ನಮಗೆ 2ಎ ಮೀಸಲಾತಿ ಕೊಡಬಾರದು ಅನ್ನುವುದಕ್ಕೆ ನೀವ್ಯಾರು, ಮೀಸಲಾತಿ ಯಾರ ಸ್ವತ್ತು ಅಲ್ಲ. ಅಂಬೇಡ್ಕರ್ ಅವರು ಸಂವಿಧಾನಲ್ಲಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಅಂದಿದ್ದಾರೆ ಎಂದರು.
ನಾಳೆ ಬೇಡಿಕೆ ಈಡೇರಿಸದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿಸಿ ಪಾಟೀಲ್ ಸ್ವಾಮೀಜಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.