ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿರುವ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದು, ಯಶವಂತಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಸಹ ಅಂತಿಮಗೊಳಿಸಿದೆ. ಯಶವಂತಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಅವರು ಎಂದು ಮಾಜಿ ಮುಖ್ಯಮಂತ್ರಿ ಹೆಚ್ .ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಕೆಂಗೇರಿಯಲ್ಲಿ ಇಂದು ನಡೆದ ಪಕ್ಷದ ಸಭೆಯಲ್ಲಿ ಜವರಾಯಿಗೌಡ ಹೆಸರು ಪ್ರಕಟಿಸಲಾಯಿತು.
ಈ ವೇಳೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಕೆಲವೊಂದು ಸಮಸ್ಯೆಯಿಂದ ನಮಗೆ ಹಿಂದೆ ಹಿನ್ನೆಡೆಯಾಗಿದೆ. ಹೀಗಾಗಿ ನಾವು ಸೋತಿದ್ದೇವೆ. ನಿಷ್ಠಾವಂತ ಕಾರ್ಯಕರ್ತರು ಇಲ್ಲಿ ಇದ್ದಾರೆ. ಯಶವಂತಪುರ ಕ್ಷೇತ್ರದಿಂದ ಈ ಹಿಂದೆಯೂ ಜವರಾಯಿಗೌಡ ಅವರು ಸ್ಪರ್ಧಿಸಿದ್ದರು. ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದರು. ಕಾಂಗ್ರೆಸ್ ನವರು ಬಿಜೆಪಿ ಬಿ ಟೀಂ ಎಂದು ಹೇಳಿ ದಾರಿ ತಪ್ಪಿಸಿದರು. ಇಡೀ ರಾಜ್ಯದಲ್ಲಿ ಅಪನಂಬಿಕೆ ಮೂಡಿಸಿದರು. ಅಲ್ಲದೇ, ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಕಾಂಗ್ರೆಸ್‌ನವರು ಮತ ಹಾಕಿದರು. ಹೀಗಾಗಿ ಸೋಲಬೇಕಾಯಿತು. ಯಶವಂತಪುರ ಕ್ಷೇತ್ರವು ಇಂದಿಗೂ ಜೆಡಿಎಸ್‌ನ ಭದ್ರಕೋಟೆ ಎಂದು ಹೇಳಿದರು.
ಜವರಾಯಿಗೌಡ ಅವರಿಗೆ ಚುನಾವಣೆ ಹೇಗೆ ನಡೆಸಬೇಕು ಎಂದು ಗೊತ್ತಾಗದ ಕಾರಣಕ್ಕಾಗಿ ಒಂದಿಷ್ಟು ಹಿನ್ನಡೆಯಾಯಿತು. ಕಾರ್ಯಕರ್ತರಿಂದ ಯಾವುದೇ ಸಮಸ್ಯೆ ಇಲ್ಲ. ಮೂರು ಚುನಾವಣೆಯಲ್ಲಿ ಸ್ಪರ್ಧಿಸಿ ಆರ್ಥಿಕವಾಗಿ ಸುಸ್ತಾಗಿದ್ದಾರೆ. ಮೊದಲ ಬಾರಿ ಸೋತರೂ ಜನ ಜವರಾಯಿಗೌಡ ಅವರ ಕೈ ಬಿಟ್ಟಿಲ್ಲ. ಈಗ ರಾಜ್ಯದಲ್ಲಿ ಜೆಡಿಎಸ್ ಅಲೆ ಎದ್ದಿದೆ ಎಂದರು. ಕಾರ್ಯಾಗಾರ ನಡೆಸಿದ ಬಳಿಕ ಬಹಳ ಬದಲಾಗಿದೆ. ಈಗಾಗಲೇ 93 ಕ್ಷೇತ್ರಗಳ ಅಭ್ಯರ್ಥಿ ಘೋಷಣೆಯಾಗಿದೆ. 61 ಕ್ಷೇತ್ರಗಳಲ್ಲಿ ಮತಯಾತ್ರೆ ಮುಗಿಸಲಾಗಿದೆ ಎಂದು ತಿಳಿಸಿದರು.
ಕಣ್ಣೀರಿಟ್ಟ ಜವರಾಯಿಗೌಡ: ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿ ಆರ್ಥಿಕವಾಗಿ ನಷ್ಟವಾಗಿದ್ದರಿಂದ ಜವರಾಯಿಗೌಡ ಮನೆಯಲ್ಲಿ ಈ ಬಾರಿ ಬೇಡ ಎನ್ನುತ್ತಿದ್ದಾರೆ. ಕಾರ್ಯಕರ್ತರು ದೇವರು ಇದ್ದಂತೆ. ಜನರ ಅಭಿಮಾನ ಎಷ್ಟಿದೆ ನೋಡು. ಯಾರಿಗೂ ದುಡ್ಡು ಕೊಟ್ಟು ಕಾರ್ಯಕ್ರಮ ಮಾಡಿ ಎಂದು ಹೇಳಿಲ್ಲ. ಕಾರ್ಯಕರ್ತರೇ ಸೇರಿ ಮಾಡಿದ ಕಾರ್ಯಕ್ರಮ ಇದು ಎಂದು ಕುಮಾರಸ್ವಾಮಿ ಹೇಳಿದಾಗ, ಜವರಾಯಿಗೌಡ ಅವರು ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ವಿವಿಧ ಹಾರಗಳನ್ನು ಹಾಕಿ ಬುಕ್ ಆಫ್ ರೆಕಾರ್ಡ್ ಆಗಿದೆ. ಈವರೆಗೆ ಯಾವ ನಾಯಕರಿಗೂ ಇದನ್ನು ಮಾಡಿಲ್ಲ. ದೆಹಲಿಯಲ್ಲಿಯೂ ಚರ್ಚೆಯಾಗುತ್ತಿದೆ. ಜನ ಹೇಗೆ ಸೇರುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ. ಜವರಾಯಿಗೌಡ ಅವರಿಗೆ ಅನುಕಂಪದ ಮತ ಹಾಕುತ್ತಾರೆ. ಅವರಿಗೆ ಅನ್ಯಾಯವಾಗಿದೆ ಎಂದು ಜನ ಮತ ಹಾಕಲು ರೆಡಿಯಾಗಿದ್ದಾರೆ ಎಂದರು. ಯಶವಂತಪುರ ಕ್ಷೇತ್ರಕ್ಕೆ ಜವರಾಯಿಗೌಡ ಅಭ್ಯರ್ಥಿ ಎಂದು ಕುಮಾರಸ್ವಾಮಿ ಅವರು ಘೋಷಣೆ ಮಾಡಿದ ಬಳಿಕ, ನಿಮ್ಮ ಒತ್ತಾಯದ ಮೇರೆಗೆ ನಿಲ್ಲುತ್ತಿದ್ದೇನೆ. ಈ ಬಾರಿ ಜೆಡಿಎಸ್ ಗೆಲ್ಲಬೇಕು ಎಂದು ಜವರಾಯಿಗೌಡ ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಹತ್ತು ರೂಪಾಯಿ ನೋಟಿನ ಕಂತೆ ಜವರಾಯಿಗೌಡರಿಗೆ ದೃಷ್ಟಿ ತೆಗೆದು ಕಾರ್ಯಕರ್ತರ ಕಡೆ ಎಸೆದರು. ಜವರಾಯಿಗೌಡ ಅವರು ಮೂರು ಬಾರಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದು, ಕೆಲವೇ ಅಂತರದಲ್ಲಿ ಸೋಲು ಅನುಭವಿಸಿದರು. ಇದೀಗ 2023 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದಾರೆ.
ಇದನ್ನೂ ಓದಿ:ಮೊದಲ ಬಾರಿಗೆ ಬೆಳಗಾವಿ ಪಾಲಿಕೆ ಗದ್ದುಗೆ ಏರಿದ ಬಿಜೆಪಿ: ಬಿಜೆಪಿ ಪಾಲಾದ ಮೇಯರ್, ಉಪಮೇಯರ್ ಹುದ್ದೆ..