ಬೆಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆ ಸ್ಥಗಿತವಾಗಿದ್ದ ಜನಸೇವಕ ಯೋಜನೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಮರು ಚಾಲನೆ ನೀಡಿದರು.
ನಡೆದಾಡಲು ಸಾಧ್ಯವಾಗದ ಇಂದಿರಾನಗರದ ಶ್ರೀಮತಿ ವರಲಕ್ಷ್ಮಿ ಮತ್ತು 90 ವರ್ಷದ ಹಿರಿಯ ನಾಗರೀಕರಾದ ರಾಜಾಜಿನಗರ 3ನೇ ಬ್ಲಾಕ್ ನ ಶ್ರೀಮತಿ ನಾಗರತ್ನ ಎಂಬುವರ ಮನೆ ಬಾಗಿಲಿಗೆ ನಾಗರಿಕ ಯೋಜನೆ ಸೌಲಭ್ಯ ಒದಗಿಸುವ ಮೂಲಕ ಯೋಜನೆಯನ್ನ ಪುನಾರಂಭ ಮಾಡಿದರು. ಈ ಹಿರಿಯ ನಾಗರಿಕರು ಆಧಾರ್ ಕಾರ್ಡ್ ನ್ಯೂನ್ಯತೆ ಸರಿಪಡಿಸಲು ಅರ್ಜಿ ಸಲ್ಲಿಸಿದ್ದರು. ಇಂದು ಯೋಜನೆ ಪುನಾರಂಭದ ಅಂಗವಾಗಿ ಆಧಾರ್ ಕಾರ್ಡ್ ನ್ಯೂನ್ಯತೆ ಸರಿಪಡಿಸಿ ಅವರ ಮನೆ ಬಾಗಿಲಿಗೆ ಸೇವೆ ಒದಗಿಸಲಾಯಿತು.
ಬೆಂಗಳೂರು ಮಹಾನಗರ ವ್ಯಾಪ್ತಿಯ ರಾಜಾಜಿನಗರ, ಮಹದೇವಪುರ, ದಾಸರಹಳ್ಳಿ, ಬೆಂಗಳೂರು ದಕ್ಷಿಣ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನಸೇವಕ ಯೋಜನೆ ಪುನಾರಂಭಗೊಂಡಿದ್ದು, ಸಚಿವರು ಈ ವ್ಯಾಪ್ತಿಯಲ್ಲಿ ಯೋಜನೆಗೆ ಚಾಲನೆ ನೀಡಿದರು. ಯೋಜನೆ ಪುನಾರಂಭವಾದ ನಂತರ ಜನಸೇವಕರು ಅರ್ಜಿದಾರರ ಮನೆ ಬಾಗಿಲಿಗೆ ಅಗತ್ಯ ಸೇವೆಗಳನ್ನು ತಲುಪಿಸಿದರು.
ರಾಜಾಜಿನಗರದಲ್ಲಿ ನಡೆದ ಸಮಾರಂಭದಲ್ಲಿ ಯೋಜನೆಗೆ ಚಾಲನೆ ನೀಡಿದ ಸಚಿವರು, ನಾಗರೀಕರ ಮನೆ ಬಾಗಿಲಿಗೆ ಸಾರ್ವಜನಿಕ ಸೌಲಭ್ಯಗಳನ್ನು ತಲುಪಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಸಾರ್ವಜನಿಕರು ಯೋಜನೆಯನ್ನು ಸದುಪಯೋಗ ಪಡೆಯಬೇಕೆಂದರು. ಬಿಬಿಎಂಪಿ, ಕಂದಾಯ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ 55 ಸೇವೆಗಳನ್ನು ಜನಸೇವಕ ಯೋಜನೆ ಮೂಲಕ ನಾಗರಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಈ ಸೇವೆಗಳಲ್ಲಿ ಆಧಾರ್ ಕಾರ್ಡ್ ನ್ಯೂನ್ಯತೆ ಸರಿಪಡಿಸುವುದು ಸಹ ಸೇರಿದೆ. ಹಿರಿಯ ನಾಗರಿಕರು ಮತ್ತು ಸರ್ಕಾರಿ ಕೆಲಸಗಳಿಗಾಗಿ ಕರ್ತವ್ಯಕ್ಕೆ ರಜೆ ಹಾಕಿ ಕಚೇರಿಗಳಿಗೆ ಅಡ್ಡಾಡುವುದನ್ನು ತಪ್ಪಿಸಲು ಮತ್ತು ವಿಶೇಷವಾಗಿ ಮಧ್ಯವರ್ತಿಗಳ ಹಾವಳಿಯಿಂದ ಮುಕ್ತಿಗೊಳಿಸಿ ನೇರವಾಗಿ ಫಲಾನುಭವಿಗಳಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಈ ಯೋಜನೆ ಸಹಕಾರಿಯಾಗಿದೆ ಎಂದು ಸುರೇಶ್ ಕುಮಾರ್ ಹೇಳಿದರು.
ಕೆಲವೇ ತಿಂಗಳಲ್ಲಿ ಜನಸೇವಕ ಯೋಜನೆಯನ್ನು ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ವಿಸ್ತರಿಸಲಾಗುವುದು. ಆ ನಂತರ ರಾಜ್ಯದೆಲ್ಲೆಡೆ ವಿಸ್ತರಿಸಲು ಚಿಂತನೆ ನಡೆಸಲಾಗಿದ್ದು, ಅದಕ್ಕಾಗಿ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಸಕಾಲ ಮಿಷನ್, ಜನಸೇವಕ ಯೋಜನೆ, ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.