ಬೆಂಗಳೂರು : ನಗರದ ಕೆ.ಜಿ. ರಸ್ತೆಯಲ್ಲಿರುವ ಪಾರಂಪರಿಕ ಜನತಾ ಬಜಾರ್ ಕಟ್ಟಡ ತೆರವು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಎರಡು ವರ್ಷ ಕಳೆದರೂ ಆಕ್ಷೇಪಣೆ ಸಲ್ಲಿಸದ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.
ಸ್ಥಳದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಜನತಾ ಬಜಾರ್ ಕಟ್ಟಡ ತೆರವು ಮಾಡುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದು ಕೋರಿ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರ್ ಹೆರಿಟೇಜ್ ಸಲ್ಲಿಸಿರುವ ಪಿಐಎಲ್ ಅನ್ನು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಓದಿ: ಗೌರಿಬಿದನೂರಿನ ಸೈನಿಕನೀಗ ಲೆಫ್ಟಿನೆಂಟ್ ಕರ್ನಲ್... 23 ವರ್ಷದ ಸೇವೆಗೆ ಒಲಿದು ಬಂತು ಹುದ್ದೆ
ಈ ವೇಳೆ ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ 2020ರ ಜನವರಿಯಲ್ಲಿ ಆಕ್ಷೇಪಣೆ ಸಲ್ಲಿಕೆಗೆ 3 ವಾರ ಕಾಲಾವಕಾಶ ನೀಡಲಾಗಿತ್ತು. ಅಂದಿನಿಂದ ಈವರೆಗೆ ಬರೀ ಕಾಲಾವಕಾಶ ಕೇಳಿಕೊಂಡೇ ಬರುತ್ತಿದ್ದೀರಿ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವರ್ಷಗಳು ಬೇಕೇ ಎಂದು ಪ್ರಶ್ನಿಸಿತು.
ಕೋರ್ಟ್ ಆದೇಶಗಳ ಪಾಲನೆಯಲ್ಲಿ ಸರ್ಕಾರ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿದೆ. ಇಂತಹ ಧೋರಣೆಯನ್ನು ಸಹಿಸಲಾಗದು. ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಕಠಿಣ ಆದೇಶಗಳನ್ನು ಹೊರಡಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿತು. ಹಾಗೆಯೇ, ಈ ಸೂಚನೆಯ ಪ್ರತಿಯನ್ನು ಸಿಎಸ್‌ಗೆ ಕಳುಹಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.