ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾನಿಲಯಗಳು ಮತ್ತು ಇತರ ಅನೇಕ ಸಂಘ ಸಂಸ್ಥೆಗಳು ಕೋಮುವಾದಿ ಸಂಘಟನೆಗಳಾಗಿ ಪರಿವರ್ತನೆಯಾಗಿವೆ. ಹೀಗೆಂದು ದೆಹಲಿಯ ಜೆಎನ್ಯುಯ ಪ್ರೊಫೆಸರ್ ಹಾಗೂ ಹಿರಿಯ ಸಾಹಿತಿಯೂ ಆಗಿರುವ ಡಾ.ಪುರುಷೋತ್ತಮ ಬಿಳಿಮಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಳೆ ನಡೆಯಲಿರುವ ಜನಸಾಹಿತ್ಯ ಸಮ್ಮೇಳನದ ಕುರಿತು ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಂಟ್ರಲ್ ವಿವಿಯಲ್ಲಿ ಇಬ್ಬರು ಅಧ್ಯಾಪಕರು ಆರ್ಎಸ್ಎಸ್ ಚಡ್ಡಿ ಹಾಕಿಕೊಂಡು ಒಳಗೆ ಇದ್ದಾರೆ ಎಂಬುದನ್ನು ಇಂದು ನೋಡಿದೆ. ಹೊರಗೆ ಹೋಗಿ ಮಾಡಿ, ಅದು ಸಂಘಟನೆ, ಸರ್ಕಾರದ ಅನುಮತಿ ಇದೆ. ಅನಧಿಕೃತ ಎಂದು ಯಾರೂ ಹೇಳುವುದಿಲ್ಲ. ಅರ್ಥ ಮಾಡಿಕೊಳ್ಳದೇ, ಪರ್ಯಾಯ ಸಂಘಟನೆಗಳು ಕಟ್ಟಿಕೊಳ್ಳದಿದ್ದರೆ ಕರ್ನಾಟಕಕ್ಕೆ ಕಷ್ಟ ಎಂದು ಆತಂಕ ವ್ಯಕ್ತಪಡಿಸಿದರು.
ನಿನ್ನೆ ದೊಡ್ಡರಂಗೇಗೌಡರು ಸಾಹಿತ್ಯ ಸಮೇಳನದಲ್ಲಿ ಚೆನ್ನಾಗಿಯೇ ಮಾತನಾಡಿದ್ದಾರೆ. ಆದರೆ, ಮಹೇಶ್ ಜೋಶಿ ಕೋಮುವಾದಿಯಂತೆ ವರ್ತಿಸುತ್ತಿದ್ದಾರೆ. ಅವರ ಮಗಳ ನೃತ್ಯವನ್ನು ಕಾರ್ಯಕ್ರಮದಲ್ಲಿ ಇಟ್ಟುಕೊಂಡಿದ್ದಾರೆ. ನೈತಿಕತೆಯನ್ನು ಅವರು ಮರೆತಿದ್ದಾರೆ. ಲಜ್ಜೆ ಬಿಟ್ಟು ಕೆಲಸ ಮಾಡಿದರೆ ನಮ್ಮ ಸಂಸ್ಥೆಗಳು ಎಲ್ಲಿಗೆ ತಲುಪುತ್ತವೆ. ಸರ್ಕಾರದ ಅಂಗಗಳನ್ನಾಗಿ ಮಾಡಿಕೊಂಡು ಹಣಕ್ಕಾಗಿ, ಒಂದು ಕಾರಿಗಾಗಿ ಸಾಹಿತ್ಯ ಪರಿಷತನ್ನೇ ಸರ್ಕಾರದ ಪಾದದಲ್ಲಿ ಇಡುವುದನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ ಎಂದರು.
ಕರ್ನಾಟಕದ ಸಾಂಸ್ಕೃತಿಕ ಸಂಘ ಸಂಸ್ಥೆಯಗಳು, ಸ್ವಾಯತ್ತ ಸಂಸ್ಥೆಗಳು ಹಿಡಿಯುತ್ತಿರುವ ಅಧಃಪಥನದ ಹಾದಿಯನ್ನು ಸಾಹಿತ್ಯ ಪರಿಷತ್ತು ಇತ್ತೀಚೆಗೆ ತೋರಿಸಿದೆ. ಯಾವ ಕಾರಣದಿಂದ ಸ್ಥಾಪಿತವಾಯಿತು, ಕನ್ನಡ ಸಾಹಿತ್ಯ ಪರಿಷತ್ತು ಇರಬಹುದು, ವಿಶ್ವವಿದ್ಯಾನಿಲಯಗಳು ಇರಬಹುದು. ಇವು ತಮ್ಮ ಉದ್ದೇಶದಿಂದ ದೂರ ಸರಿದು ವರ್ತಮಾನದ ಅಗತ್ಯಗಳಿಗೆ ಪ್ರತಿಕ್ರಿಯಿಸಲಾಗದ ಸ್ಥಿತಿಗೆ ತಲುಪಿದಾಗ ನಮ್ಮಂತವರು ಈ ಕುರಿತು ಎಚ್ಚರಿಕೆ ತೆಗದುಕೊಂಡು ಜನರಿಗೆ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಮಹನೀಯರು ಕೆಲಸ ಮಾಡಿದ ಪರಿಷತ್ ಅದು, ಆದರೆ?: 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು. ಸಾಹಿತ್ಯ ಪರಿಷತ್ ಚರಿತ್ರೆಯನ್ನು ನೋಡಿದರೆ ಡಿವಿಜಿ, ಮಾಸ್ತಿ ಅಯ್ಯಂಗಾರ್ ಮತ್ತಿತರ ಸಾಹಿತಿಗಳು ಕೆಲಸ ಮಾಡಿದ್ದಾರೆ. ನಂತರ ಸಾಹಿತಿ ಅಲ್ಲದ ಸಾಹಿತಿ ಸಂಘಟಕರು ಹರಿಕೃಷ್ಣ ಪುನರೂರು ಕೆಲಸ ಮಾಡಿದ್ದರು. ಆದರೆ, ನಿಧಾನವಾಗಿ ಅದು ಸಾಹಿತಿಗಳನ್ನು ದೂರ ಇಡುವ ಸ್ಥಿತಿಗೆ ತಲುಪಿದೆ. ಯಾವ ಕಾರಣಕ್ಕೆ ಪರಿಷತ್ ಅನ್ನು ಸ್ಥಾಪಿಸಲಾಯಿತೋ, ಈಗ ಅದು ಸರ್ಕಾರದ ಒಂದು ಅನುದಾನಿತ ಸಂಸ್ಥೆಯಾಗಿ ಪರಿವರ್ತನೆಯಾಗಿದೆ. ಸರ್ಕಾರದಿಂದ ಹೆಚ್ಚು ಅನುದಾನ ಪಡೆದು ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದೆ. ಇದು ವಿಶ್ವವಿದ್ಯಾನಿಲಯಗಳಿಗೂ ಬಂದಿದೆ. ಇತರ ಸಾಂಸ್ಕೃತಿಕ ಸಂಸ್ಥೆಗಳು ಹಾಗೂ ಇತರ ಅಕಾಡೆಮಿಗಳಿಗೂ ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹೇಶ್ ಜೋಶಿ ವಿರುದ್ಧ ಅಸಮಾಧಾನ: ಈಗನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಾಹಿತಿಗಳು ಅಲ್ಲ, ಸಾಹಿತ್ಯ ಸಂಘಟಕರೂ ಅಲ್ಲ. ಅವರ ಲೆಟರ್ಹೆಡ್ ನೋಡಿದರೆ ಸಾಕು. ಅದರಲ್ಲಿ ನಾಡೋಜಾ, ಡಾ. ಮಹೇಶ್ ಜೋಷಿ ಎಂದು ಹಾಕಿ, ಕೆಳಗೆ ಮಂತ್ರಿಪದವಿಗೆ ಸಮಾನ ಹುದ್ದೆ ಎಂದು ಬರೆದುಕೊಂಡಿದ್ದಾರೆ. ಅವರು ಹಾಕಿಕೊಳ್ಳಬಹುದು. ಆದರೆ, ಇದು ಸಾಹಿತ್ಯ, ಸಾಹಿತಿಗಳು ಇದುವರೆಗೂ ಬೆಳೆಸಿಕೊಂಡು ಬಂದ ವಿಭಿನ್ನವಾದದ್ದು. ಹಾಗಾಗಿ, ಪಥನಮುಖಿ ಸಾಂಸ್ಕೃತಿಕ ಸಂಘಟನೆಗಳನ್ನು ಎಚ್ಚರಿಸುವುದು ಒಂದು ಕಡೆ, ಎಚ್ಚರಗೊಳ್ಳದೇ ಹೋದರೆ ಪರ್ಯಾಯವಾದ ಸಾಂಸ್ಕೃತಿಕ ಸಂಘಟನೆಗಳನ್ನು ಕಟ್ಟಿ ಸೃಜನಶೀಲ ಕೊಡುಗೆಯನ್ನು ಕೊಡಬೇಕೆಂದು ನಾಳೆ ಜನ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದೇವೆ ಎಂದು ಹೇಳಿದರು.
ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ ಹಾವೇರಿ ಸಮ್ಮೇಳನ: ಹಾವೇರಿ ಸಾಹಿತ್ಯ ಸಮ್ಮೇಳನವು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಸಮ್ಮೇಳನದ ಕರೆಯೋಲೆ ಹೊರಗೆ ಬರುತ್ತಿರುವಂತೆ ಅನೇಕ ಲೇಖಕರು ಮತ್ತು ಕಲಾವಿದರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಇದಕ ಸಮರ್ಥವಾಗಿ ಉತ್ತರಿಸಲಾಗದ ಕಸಾಪ ಅಧ್ಯಕ್ಷರು ತಮ್ಮ ಅಪ್ರಬುದ್ಧ ನಡವಳಿಕೆಯ ಮೂಲಕ ಪ್ರತಿ ಆರೋಪಗಳನ್ನು ಮಾಡುತ್ತಾ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದ್ದಾರೆ. ಮುಸ್ಲಿಮರು ಸೇರಿದಂತೆ ಕನ್ನಡದ ಅತ್ಯಂತ ಸಶಕ್ತ ಬರಹಗಾರರರನ್ನು ಹೊರಗಿಟ್ಟಿರುವ ಪರಿಷತ್ತು, ಕನ್ನಡ ಕರ್ನಾಟಕವು ಇವತ್ತು ಎದುರಿಸುತ್ತಿರುವ ಬಹಳ ಗಂಭೀರವಾದ ಬಿಕ್ಕಟ್ಟುಗಳ ಬಗ್ಗೆ ಯಾವ ಮುಖ್ಯ ಗೋಷ್ಠಿಗಳನ್ನೂ ಹಮ್ಮಿಕೊಂಡಿಲ್ಲ ಎಂದರು.
1990 ರ ದಶಕದಲ್ಲಿ ಜಾರಿಗೆ ಬಂದ ಜಾಗತೀಕರಣದಿಂದಾಗಿ ಕನ್ನಡ, ಕೊಡವ, ಉರ್ದು, ತುಳು ಮತ್ತಿತರ ಭಾಷೆಗಳು ಒಳಗೊಂಡಂತೆ, ಭಾರತದ ಸುಮಾರು 19500ಕ್ಕೂ ಹೆಚ್ಚು ಭಾಷೆಗಳನ್ನು ಅಂಚಿಗೆ ತಳ್ಳಿದೆ. ಖಾಸಗೀಕರಣವು ಆರ್ಥಿಕ ಅಸಮಾನತೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ. ದಲಿತರು, ಮಹಿಳೆಯರು ಮತ್ತು ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯಗಳು ನಿರಂತರವಾಗಿ ಮುಂದುವರೆದಿವೆ. ಸಾಮಾಜಿಕ ನ್ಯಾಯಕ್ಕಾಗಿ ಚಾಲ್ತಿಗೆ ತಂದಿರುವ ಮೀಸಲಾತಿಯನ್ನು ಅರ್ಥಹೀನಗೊಳಿಸಿ, ಅದನ್ನು ಯಾರ್ಯಾರೋ ಕಿತ್ತು ತಿನ್ನುವಂತೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಳೆ ಜನಸಾಹಿತ್ಯ ಸಮ್ಮೇಳನ : ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪರಂಪರೆ, ದಲಿತ, ಅಲ್ಪಸಂಖ್ಯಾತ ಹಾಗೂ ಮಹಿಳೆಯರ ಕಡೆಗಣನೆ ಮಾಡಿರುವುದನ್ನು ವಿರೋಧಿಸಿ ಪರ್ಯಾಯವಾಗಿ ನಾಳೆ ಬೆಳಗ್ಗೆ 9ಗಂಟೆಗೆ ಕೆ.ಆರ್. ವೃತ್ತದಲ್ಲಿನ ಅಲ್ಯುಮ್ನಿ ಅಸೋಸಿಯೇಷನ್ ಆವರಣದಲ್ಲಿ 'ಜನ ಸಾಹಿತ್ಯ ಸಮ್ಮೇಳನ' ಏರ್ಪಡಿಸಲಾಗಿದೆ. ಸಂತ ಶಿಶುನಾಳ ಶರೀಫ ಮತ್ತು ಗುರು ಗೋವಿಂದ ಭಟ್ ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಕನ್ನಡ ಧ್ವಜಾರೋಹಣವನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಕರವೇ ಅಧ್ಯಕ್ಷ ಶಿವರಾಮೇಗೌಡ, ಬಿ.ಎನ್.ಜಗದೀಶ್ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬಂಡಾಯದ ಗೆರೆಗಳು: ಬೆಳಗ್ಗೆ 9:30ಕ್ಕೆ ವ್ಯಂಗ್ಯಚಿತ್ರ ಮತ್ತು ಪೋಸ್ಟರ್ಗಳ ಪ್ರದರ್ಶನ ಉದ್ಘಾಟನೆ ಕಲಾವಿದ ರಘುನಂದನ ಮಾಡಲಿದ್ದು, ಪಿ.ಮುಹಮ್ಮದ್, ದಿನೇಶ್ ಕುಕ್ಕುಜಡ್ಕ, ಸತೀಶ್ ಆಚಾರ್ಯ, ಪಂಜುಗಂಗೊಳ್ಳಿ, ಬಾದಲ್ ನಂಜುಂಡಸ್ವಾಮಿ, ಚೇತನ್ ಪುತ್ತೂರು, ರೂಮಿ ಹರೀಶ್ ರೂಪ ಕಲ್ಲಿಗನೂರು, ಚರಿತಾ ಮೈಸೂರು, ನಭಾ ಒಕ್ಕುಂದ, ನಟ ಪ್ರಕಾಶ್ ರಾಜ್ ಇನ್ನಿತರ ಕಲಾವಿದರು ಭಾಗವಹಿಸಲಿದ್ದಾರೆ.
ಬೆಳಗ್ಗೆ 10ಗಂಟೆಗೆ 'ಚಂಪಾ ವೇದಿಕೆ'ಯಲ್ಲಿ ಜನಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ನೆರವೇರಿಸಲಿದ್ದು, ಅಧ್ಯಕ್ಷತೆ ಸಾಹಿತಿ ಬಾನು ಮುಸ್ತಾಕ್ ವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ದಿಕ್ಕೂಚಿ ಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಪ್ರೊ.ಎಸ್.ಜಾಫೆಟ್, ಜಾಣಗೆರೆ ವೆಂಕಟರಾಮಯ್ಯ, ಜನ್ನಿ(ಜನಾರ್ದನ್), ಅಗ್ನಿಶ್ರೀಧರ್, ಅಕ್ಷೆ ಪದ್ಮಾಲಿ, ವಡಗೆರೆ ನಾಗರಾಜಯ್ಯ ಭಾಗವಹಿಸಲಿದ್ದಾರೆ.
ನಾಳೆ ವಿಚಾರಗೋಷ್ಠಿ: ಮಧ್ಯಾಹ್ನ 12:30ರಿಂದ 1:30ಕ್ಕೆ 'ಸಾಹಿತ್ಯ, ಪ್ರಭುತ್ವ ಮತ್ತು ಬಹುತ್ವ' ವಿಚಾರಗೋಷ್ಠಿ ನಡೆಯಲಿದ್ದು, ಡಾ. ಮುಹಮ್ಮದ್ ಮುಸ್ತಾಫಾ ವಿಷಯ ಮಂಡನೆ ಮಾಡಲಿದ್ದಾರೆ. 'ಕನ್ನಡ ನಾಡು ನುಡಿ-ಟಿಪ್ಪು ಕೊಡುಗೆಗಳು ಕುರಿತು ಪತ್ರಕರ್ತ ಟಿ.ಗುರುರಾಜ್ ಮಾತನಾಡಲಿದ್ದಾರೆ. ಲಿಂಗದೇವರು ಹಳೆಮನೆ ಸಂಪಾದಕತ್ವದ 'ಧೀರ ಟಿಪ್ಪು ಲಾವಣಿಗಳು' ಮತ್ತು ಟಿ.ಗುರುರಾಜ್ ಬರೆದಿರುವ 'ನಮ್ಮ ಟಿಪ್ಪ ವದಂತಿ ಮತ್ತು ಸತ್ಯ ಸಂಗತಿ' ಪುಸ್ತಕಗಳ ಬಿಡುಗಡೆ ಮಾಡಲಿದ್ದು, ನಾ.ದಿವಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ ಆಹಾರದ ಮೇಲಿನ ರಾಜಕಾರಣ ಮತ್ತು ದೌರ್ಜನ್ಯ' ವಿಷಯ ಮಂಡನೆ'ಯನ್ನು ಡಾ.ರಂಗನಾಥ ಕಂಟನಕುಂಟೆ ಮಾಡಲಿದ್ದು, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ವಹಿಸಲಿದ್ದು, ದೀಪದ ಮಲ್ಲಿ, ದಾದಪೀ ಜೈಮನ್, ಚಾಂದ್ ಪಾಷಾ, ಕಲ್ಪಿಸಲಾಗಿದೆ. ಪ್ರಕಾಶ್ ಮಂಟೇದಾ, ವೀರಪ್ಪ, ಟೀನಾ ಶಶಿಕಾಂತ್, ಸಿರಾಜ್ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ.
ಸಂಜೆ 'ಸೌಹಾರ್ದ ಮತ್ತು ಕನ್ನಡತನ' ವಿಷಯದ ಕುರಿತು ರಾಜೇಂದ್ರ ಚೆನ್ನಿ ವಿಚಾರ ಮಂಡನೆ ಮಾಡಲಿದ್ದು, 'ಅಲ್ಪಸಂಖ್ಯಾತರು ಮತ್ತು ದಲಿತರ ಮೇಲಿನ ದಾಳಿ: ಸಾಹಿತ್ಯ ಲೋಕದ ಜವಾಬ್ದಾರಿಗಳು' ಕುರಿತು ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಚಿಂತಕ ಮುನೀರ್ ಕಾಟಿಪಳ್ಳ ವಿಚಾರ ಮಂಡನೆ ಮಾಡಲಿದ್ದಾರೆ. 'ಕನ್ನಡವನ್ನು ಬೆಳಗಿಸಿದ ಕ್ರೈಸ್ತ ಮಿಷನರಿಗಳು' ವಿಷಯದ ಕುರಿತು ಡಾ.ಕುಮಾರಸ್ವಾಮಿ ಬೆಣ್ಣೆಹಳ್ಳಿ ವಿಚಾರ ಮಂಡಿಸಲಿದ್ದಾರೆ.
ಸಂಜೆ 5ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಅಧ್ಯಕ್ಷತೆಯನ್ನು ಡಾ.ಜಿ.ರಾಮಕೃಷ್ಣ ವಹಿಸಲಿದ್ದು, ಸಮಾರೋಪ ಭಾಷಣವನ್ನು ಡಾ.ಕೆ. ಮರುಳಸಿದ್ದಪ್ಪ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಿ.ಬಸವಲಿಂಗಯ್ಯ, ಪಿಚ್ಚಳ್ಳಿ ಶ್ರೀನಿವಾಸ್, ದು.ಸರಸ್ವತಿ, ಯು.ಟಿ.ಫರ್ಜಾನ, ವಸಂತರಾಜ್, ಅನಂತ್ ನಾಯ್ಕ, ರವಿಕುಮಾರ್ ಟೆಲೆಕ್ಸ್ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ 'ಬೀದಿಗೆ ಬರಲಿ ಕಲೆ-ಸಾಹಿತ್ಯ' ಸಮುದಾಯ ಬೆಂಗಳೂರು ಬೀದಿ ನಾಟಕ ಹಾಗೂ ಪ್ರಮುಖ ಪ್ರಕಾಶನ ಸಂಸ್ಥೆಗಳಿಂದ ಬಹುಮುಖ್ಯ ಸಾಹಿತ್ಯ ಕೃತಿಗಳ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: ಕಲಾವಿದರ ಹಾಸ್ಯ, ಕನ್ನಡದ ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಕನ್ನಡಪ್ರೇಮಿಗಳು.. ಮನಗೆದ್ದ ಪುಸ್ತಕ ಪ್ರದರ್ಶನ ಫಲಪುಷ್ಪ ಪ್ರದರ್ಶನ