ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರದ ಮಧ್ಯೆ ಬಿಕ್ಕಟ್ಟು ಏರ್ಪಟ್ಟದೆ. ಇದರ ಬೆನ್ನಲ್ಲೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಕುತೂಹಲ ಕೆರಳಿಸಿದೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ. ಸಿಎಂ ಚೇಂಬರ್ನಲ್ಲಿ ಈ ಸಭೆ ಆಯೋಜನೆಗೊಂಡಿದ್ದು, ಮೇಕೆದಾಟು ವಿಚಾರವಾಗಿ ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಇದರ ಬಳಿಕ ಜಲ ಜೀವನ್ ಮಿಷನ್ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುವ ಸಾಧ್ಯತೆ ಕೂಡ ಇದೆ.
ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸರ್ಕಾರ ಕರ್ನಾಟಕದ ಜೊತೆ ಸಂಘರ್ಷಕ್ಕೆ ಇಳಿದಿದ್ದು, ಈ ಮಧ್ಯೆ ಕೇಂದ್ರ ಜಲಶಕ್ತಿ ಸಚಿವ ಶೆಖಾವತ್ ಸಿಎಂ ಭೇಟಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಮೇಕೆದಾಟು ಯೋಜನೆಗೆ ಅಗತ್ಯ ಅನುಮತಿಯನ್ನು ತ್ವರಿತ ಗತಿಯಲ್ಲಿ ನೀಡುವಂತೆ ಕೇಂದ್ರ ಸಚಿವರಿಗೆ ಸಿಎಂ ಮನವಿ ಮಾಡುವ ಸಾಧ್ಯತೆ ಹೆಚ್ಚಿದೆ. ಮೇಕೆದಾಟು ಯೋಜನೆಯ ಸಾಧಕ-ಬಾಧಕ, ಅನುಕೂಲದ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿ ಯೋಜನೆಗೆ ಗ್ರೀನ್ ಸಿಗ್ನಲ್ ನೀಡುವ ಸಂಬಂಧ ಒತ್ತಡ ಹೇರಲಿದ್ದಾರೆ ಎನ್ನಲಾಗಿದೆ. ತಮಿಳುನಾಡು ಸರ್ಕಾರ ಯೋಜನೆ ಜಾರಿ ಸಂಬಂಧ ಅನಾವಶ್ಯಕವಾಗಿ ಅಡ್ಡಿಪಡಿಸುತ್ತಿದೆ. ಜೊತೆಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ತಮಿಳುನಾಡು ಸರ್ಕಾರ ಕರ್ನಾಟಕದ ಅನುಮತಿ ಇಲ್ಲದೆ ಎರಡು ವಿದ್ಯುತ್ ಯೋಜನೆ ಅನುಷ್ಠಾನಗೊಳಿಸುತ್ತಿರುವ ಬಗ್ಗೆ ಸಿಎಂ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆ ಹೆಚ್ಚಿದೆ.
ಇದೇ ವೇಳೆ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚುವರಿ ಅನುದಾನ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ. ಇದರ ಜೊತೆಗೆ ಕಳಸಾ ಬಂಡೂರಿ ಯೋಜನೆಗೂ ಆದಷ್ಟು ಬೇಗ ಅಗತ್ಯ ಅನುಮತಿ ನೀಡಿ, ಯೋಜನೆ ಜಾರಿಗೆ ಸಹಕರಿಸುವಂತೆ ಸಿಎಂ ಯಡಿಯೂರಪ್ಪ ಕೋರಲಿದ್ದಾರೆ ಎನ್ನಲಾಗಿದೆ.
ಬಸವಸಾಗರ ಜಲಾಶಯಕ್ಕೆ ಕೇಂದ್ರ ಸಚಿವರ ಭೇಟಿ
ಯಾದಗಿರಿ ಜಿಲ್ಲೆಯ ಬಸವಸಾಗರ ಜಲಾಶಯಕ್ಕೆ ಕೇಂದ್ರ ಸಚಿವರು ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ಸಚಿವರು ತದನಂತರ ಬಸವಸಾಗರ ಜಲಾಶಯ ವೀಕ್ಷಣೆ ಮಾಡಲಿದ್ದು, ಸ್ಯಾಡ್ ಫೇಸ್ 10 ಅಡಿಯಲ್ಲಿ ನಿರ್ಮಿಸಲಾಗಿರುವ ಸ್ವಯಂಚಾಲಿತ ಗೇಟ್ಗಳ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.