ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡಿರುವ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ ಆಯೋಜಿಸಿದ್ದ ಸಮರ್ಥ ನಾಯಕತ್ವ ಸ್ವಾವಲಂಬಿ ಭಾರತ ಅಭಿಯಾನದ ಕರ್ನಾಟಕ ಜನ ಸಂವಾದ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಬೃಹತ್, ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ವರ್ಚುವಲ್ ರ್ಯಾಲಿಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು, ಕೊರೊನಾ ಸಂಕಷ್ಟ ಕಾಲದಲ್ಲಿ ಜನರನ್ನು ಯಶಸ್ವಿಯಾಗಿ ತಲುಪಲು ಆಯೋಜಿಸಿದ್ದ ಈ ಜನ ಸಂವಾದ ಕಾರ್ಯಕ್ರಮ ತನ್ನ ಗುರಿಯನ್ನು ತಲುಪಿದೆ. ಬಿಜೆಪಿ ಕಾರ್ಯಾಲಯಗಳು, ಮನೆ ಮನೆಗಳು ಹಾಗೂ ತಮ್ಮ ಮೊಬೈಲ್‌ಗಳ ಮೂಲಕ ಈ ರ್ಯಾಲಿಯಲ್ಲಿ ಭಾಗವಹಿಸಿದ ಕೋಟ್ಯಂತರ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 6 ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ತಮ್ಮ 2ನೇ ಅವಧಿಯ ಮೊದಲ ವರ್ಷದ ಸಾಧನೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.
ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೋಟ್ಯಂತರ ಕಾರ್ಯಕರ್ತರನ್ನು ತಲುಪುವುದು ಸುಲಭ ಕಾರ್ಯವನ್ನು ಇಂತಹ ಹೊಸತನಗಳಿಗೆ ಯಾವಾಗಲೂ ಸಿದ್ಧವಾಗಿರುವ ಭಾರತೀಯ ಜನತಾ ಪಕ್ಷ ಹೊಸದೊಂದು ಗುರಿ ತಲುಪಿದೆ ಎಂದರು.
ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾರವರು ತಮ್ಮ ಭಾಷಣದಲ್ಲಿ ತಿಳಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ 6 ವರ್ಷಗಳಲ್ಲಿ 6 ದಶಕಗಳಿಂದ ಬಾಕಿ ಇದ್ದ ಕಾರ್ಯಗಳನ್ನು ಮಾಡುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ ವಿಶ್ವದಲ್ಲೇ ಅತ್ಯಂತ ಪರಿಣಾಕಾರಿಯಾಗಿ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಿದೆ. ಬಹಳಷ್ಟು ಸ್ವಲ್ಪ ಸಮಯದಲ್ಲಿ ದೇಶ ಈ ಮಹಾಮಾರಿಯನ್ನು ಸಮರ್ಪಕವಾಗಿ ನಿಯಂತ್ರಿಸುವಲ್ಲಿ ಮಾಡುವಲ್ಲಿ ಪ್ರಧಾನಿಗಳ ಕೊಡುಗೆ ಬಹಳಷ್ಟಿದೆ ಎಂದರು.