ಬೆಂಗಳೂರು : ನಗರದ ರಸ್ತೆ ಗುಂಡಿಗಳು ಹಾಗೂ ಕಳಪೆ ರಸ್ತೆ ಕಾಮಗಾರಿ ವಿರುದ್ಧ ಹೋರಾಡಲು ಆಮ್ ಆದ್ಮಿ ಪಾರ್ಟಿಯು ಕಾರ್ಯಪಡೆ ಹಾಗೂ ವಾಟ್ಸ್‌ಆ್ಯಪ್ ಸಹಾಯವಾಣಿಯನ್ನು ಆರಂಭಿಸಿದೆ ಎಂದು ಪಕ್ಷದ ಮುಖಂಡ ಹಾಗೂ ಖ್ಯಾತ ವಕೀಲ ಜಗದೀಶ್ ಕೆ ಎನ್ ಮಹಾದೇವ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಗದೀಶ್ ಮಹಾದೇವ್ ಅವರು ಮಾತನಾಡಿದರು, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯ ಭ್ರಷ್ಟಾಚಾರದಿಂದಾಗಿ ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳು ಬಿದ್ದಿವೆ. ಇವುಗಳಿಂದಾಗಿ ಕೆಲವು ವಾಹನ ಸವಾರರು ಕೈಕಾಲು ಮುರಿದುಕೊಂಡರೆ, ಇನ್ನು ಕೆಲವರು ಜೀವವನ್ನೇ ಕಳೆದುಕೊಂಡಿದ್ದಾರೆ ಎಂದರು.
ರಸ್ತೆ ಗುಂಡಿಗಳ ವಿರುದ್ಧ ಆಮ್ ಆದ್ಮಿ ಪಾರ್ಟಿಯು ಸಮರ ಆರಂಭಿಸಿದೆ. ಇದಕ್ಕಾಗಿ ವಿಶೇಷ ಕಾರ್ಯಪಡೆ ಹಾಗೂ ವಾಟ್ಸ್‌ಆ್ಯಪ್ ಸಹಾಯವಾಣಿಯನ್ನು ಆರಂಭಿಸುತ್ತಿದ್ದೇವೆ. ಸೂಕ್ತ ಕಾನೂನು ಹೋರಾಟದ ಮೂಲಕ ಸಾರ್ವಜನಿಕರಿಗೆ ನ್ಯಾಯ ದೊರಕಿಸಿ ಕೊಡುವ ಪಣ ತೊಟ್ಟಿದ್ದೇವೆ ಎಂದರು.
ನಗರದಲ್ಲಿ ರಸ್ತೆ ಕಳಪೆ ಕಾಮಗಾರಿ ನಡೆಯುತ್ತಿರುವುದು ಹಾಗೂ ಅಪಾಯಕಾರಿ ಗುಂಡಿಗಳು ಕಂಡು ಬಂದರೆ ತಕ್ಷಣವೇ ನಮ್ಮ ವಾಟ್ಸ್‌ಆ್ಯಪ್ ಸಹಾಯವಾಣಿ 9513319676 ಸಂಖ್ಯೆಗೆ ಮೆಸೇಜ್ ಕಳುಹಿಸಬಹುದು. ನಮ್ಮ ಕಾರ್ಯಪಡೆಯು ಪ್ರಕರಣದ ಬಗ್ಗೆ ಪರಾಮರ್ಶೆ ನಡೆಸಿ ಕೂಡಲೇ ಕಾರ್ಯಪ್ರವೃತ್ತವಾಗಲಿದೆ.
ಬಿಬಿಎಂಪಿ, ಸ್ಥಳೀಯ ಶಾಸಕ, ಮಾಜಿ ಕಾರ್ಪೊರೇಟರ್, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಿ, ಕಾನೂನು ಹೋರಾಟ ಆರಂಭಿಸುತ್ತೇವೆ. ರಾಜಧಾನಿ ಬೆಂಗಳೂರು ಹಾಗೂ ಇಲ್ಲಿನ ಜನರ ಹಿತಕ್ಕಾಗಿ ಯಾವುದೇ ತೊಂದರೆ ತೆಗೆದುಕೊಳ್ಳಲು ನಾವು ಸಂಪೂರ್ಣ ಸಿದ್ಧವಿದ್ದೇವೆ ಎಂದು ಜಗದೀಶ್ ಮಹಾದೇವ್ ಹೇಳಿದರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಮಾತನಾಡಿದರು. ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷವು ನಿರಂತರವಾಗಿ ಹೋರಾಡುತ್ತಿದೆ. ಹಲವು ಪ್ರತಿಭಟನೆ ಹಾಗೂ ರಸ್ತೆಗುಂಡಿ ಹಬ್ಬ ಎಂಬ ವಿನೂತನ ಚಳವಳಿ ನಡೆಸಿ ಜನಜಾಗೃತಿ ಮೂಡಿಸಿದ್ದೇವೆ. ಈಗ ವಾಟ್ಸ್‌ಆ್ಯಪ್ ಸಹಾಯವಾಣಿ ಹಾಗೂ ಕಾರ್ಯಪಡೆಯ ಮೂಲಕ ಮತ್ತೊಂದು ಹಂತದ ಹೋರಾಟ ಆರಂಭಿಸುತ್ತಿದ್ದೇವೆ.
ರಾಜ್ಯವನ್ನಾಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳು ಬೆಂಗಳೂರಿನ ರಸ್ತೆಗಳಿಗಾಗಿ ಕಳೆದ ಐದು ವರ್ಷಗಳಲ್ಲಿ ಬರೋಬ್ಬರಿ 20,000 ಕೋಟಿ ರೂ. ಮೊತ್ತವನ್ನು ಅಂದರೆ ದಿನಕ್ಕೆ ಸರಾಸರಿ 11 ಕೋಟಿ ರೂಪಾಯಿಯನ್ನು ಖರ್ಚು ಮಾಡಿವೆ. ಇದು ಜನರ ತೆರಿಗೆ ಹಣವಾಗಿದ್ದು, ಇದರಲ್ಲಾದ ಭ್ರಷ್ಟಾಚಾರವನ್ನು ಪ್ರಶ್ನಿಸುವ ಸಂಪೂರ್ಣ ಹಕ್ಕು ಜನರಿಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಹಾಗೂ ಜ್ಯೋತಿಷ್ ಕುಮಾರ್ ಉಪಸ್ಥಿತರಿದ್ದರು.