ಬೆಂಗಳೂರು : ಕಾಂಗ್ರೆಸ್ನವರಿಗೆ ಮುಸ್ಲಿಮರ ಮೇಲೆ ಪ್ರೀತಿಯಿದ್ದಿದ್ದರೆ ಉಪ ಚುನಾವಣೆಯಲ್ಲಿ ಯಾಕೆ ಟಿಕೆಟ್ ಕೊಡಲಿಲ್ಲ. ಅವರು ನಮ್ಮ ಧರ್ಮಕ್ಕೆ ಅಪಮಾನ ಮಾಡುವ 'ನಮಕ್ಕರಾಮ್' ಕೆಲಸ ಮಾಡ್ತಿದ್ದಾರೆ ಎಂದು ಜೆಡಿಎಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಅವರು ಶಾಸಕ ಜಮೀರ್ ಅಹ್ಮದ್ ಖಾನ್ ಖಾನ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇವರಿಗೆ ನಾಚಿಕೆ ಆಗಲ್ಲವೇ?. ರಾಜ್ಯಸಭೆ ಚುನಾವಣೆಯಲ್ಲಿ ಬಿ ಎಂ ಫಾರೂಕ್ ಅವರನ್ನು ಸೋಲಿಸಿದ್ದು ಯಾರು?. ಫಾರೂಕ್ ಸೋಲಿಗೆ ಜಮೀರ್ ಅಹ್ಮದ್ ಕಾರಣ ಎಂದು ಆರೋಪಿಸಿದರು.
ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ, ವರುಣಾ ಹಾಗೂ ಕನಕಪುರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಲಿ. 3-4 ಖಾತೆ ತೆಗೆದುಕೊಂಡು ಮುಸ್ಲಿಂ ಜನತೆಗೆ ಮೋಸ ಮಾಡಿದವರು ಇವತ್ತು ಮಾತಾಡ್ತಿದ್ದಾರೆ ಎಂದು ದೂರಿದರು.
ಹುಲಿ ಹೊಟ್ಟೇಲಿ ನರಿ ಹುಟ್ಟಲ್ಲ : ನಮ್ಮ ನಾಯಕರ ಬಗ್ಗೆ ಮಾತನಾಡಿದರೆ ಸರಿ ಇರಲ್ಲ. ಎಲ್ಲದ್ದಕ್ಕೂ ನಾನು ಉತ್ತರ ಕೊಡುವುದಕ್ಕೆ ರೆಡಿ. ದೇಶದಲ್ಲಿ ಜಾತ್ಯಾತೀತ, ಸೆಕ್ಯುಲರ್ ಲೀಡರ್ ಯಾರು ಅಂದರೆ ದೇವೇಗೌಡರು. ಹುಲಿಯ ಹೊಟ್ಟಿಯಲ್ಲಿ ನರಿ ಹುಟ್ಟುವುದಿಲ್ಲ. ಕುಮಾರಸ್ವಾಮಿ ಅವರು ಮುಸ್ಲಿಮರಿಗೆ ಅನೇಕ ಕೆಲಸ ಮಾಡಿದ್ದಾರೆ ಎಂದು ಜಫ್ರುಲ್ಲಾ ಅವರು ಹೇಳಿದರು.
ಸಿದ್ದರಾಮಯ್ಯ ಮುಸ್ಲಿಂ ನಾಯಕ ಅಲ್ಲ : ಸಿದ್ದರಾಮಯ್ಯ ಅವರನ್ನು ಮುಸ್ಲಿಂ ಲೀಡರ್ ಅಂತಾ ಹೇಳುವುದಕ್ಕೆ ಇವರಿಗೆ ಅಧಿಕಾರ ಕೊಟ್ಟವರು ಯಾರು?. ನಾವು ಮೊಹಮದರ ನಾಯಕತ್ವದಲ್ಲಿ ಕೆಲಸ ಮಾಡ್ತಿದ್ದೇವೆ ಎಂದು ತಿಳಿಸಿದರು. ಅಲ್ಲದೆ, ಬಿಜೆಪಿ ಬಿ ಟೀಂ ಅಂತಾ ಅನ್ನೋರು ಅಂದು ಸಮ್ಮಿಶ್ರ ಸರ್ಕಾರ ಮಾಡಿ ಅಂತಾ ಬಂದು ಆಮೇಲೆ ಕೈಕೊಟ್ಟರು ಎಂದು ವಾಗ್ದಾಳಿ ನಡೆಸಿದರು.
ನಿಮ್ಮೆಲ್ಲರ ಪ್ರಶ್ನೆಗೆ ನಾನು ಉತ್ತರ ಕೊಡುವುದಕ್ಕೆ ಸಿದ್ಧ : ನಾನು ಮುಸ್ಲಿಂ. ಯಾರು ಬೇಕಾದರೂ ಮೈದಾನಕ್ಕೆ ಬರಲಿ. ನಾನು ಉತ್ತರ ಕೊಡುತ್ತೇನೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದರೆ ಹುಷಾರ್ ಎಂದು ಜಮೀರ್ ಅಹಮದ್ ಖಾನ್ ಅವರ ಹೆಸರು ಹೇಳದೇ ಪರೋಕ್ಷ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ನಲ್ಲಿ ಮುಸ್ಲಿಮರನ್ನು ಡಸ್ಟ್ಬಿನ್ಗೆ ಹಾಕಿದ್ದಾರೆ : ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರು, ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದಾರೆ. ಕುಮಾರಸ್ವಾಮಿ, ದೇವೇಗೌಡರನ್ನು ಅಣ್ಣ ಅಣ್ಣ ಅಂತಾ ಮಾತನಾಡುವಾಗ ಎಲ್ಲಿ ಹೋಗಿತ್ತು ಇದೆಲ್ಲ?. ಪಕ್ಷ ಬಿಟ್ಟು ಹೋಗಿ ಈಗ ಮಾತಾಡೋದಾ?.
ಅನ್ಸಾರಿ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿದೋರು ಯಾರು?. ಕುಮಾರಸ್ವಾಮಿಗೆ ಮುಸ್ಲಿಮರ ಮೇಲೆ ಪ್ರೀತಿ ಇಲ್ಲದೆ ಹೋದರೆ ನಿನ್ನೆ ಮಾತಾಡಿದ ನಾಯಕರು ಯಾರು ಇಷ್ಟು ಎತ್ತರಕ್ಕೆ ಬೆಳೆಯುತ್ತಿರಲಿಲ್ಲ. ಇವರು ಬೆಳೆದಿದ್ದು ಕುಮಾರಸ್ವಾಮಿ, ದೇವೇಗೌಡರಿಂದ ಎಂದು ಜಮೀರ್ ಹಾಗೂ ಅನ್ಸಾರಿ ವಿರುದ್ಧ ವಾಗ್ದಾಳಿ ನಡೆಸಿದರು.