ಬೆಂಗಳೂರು: ಸ್ವಯಂಘೋಷಿತ ದೇವಮಾನವ ಎಂದು ಕರಸಿಕೊಳ್ಳುತ್ತಿದ್ದ ಕಲ್ಕಿ ಭಗವಾನ್ ಆಶ್ರಮದ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿ, ₹ 93 ಕೋಟಿ ನಗದು ಮತ್ತು ₹ 409 ಕೋಟಿ ಮೌಲ್ಯದ ಸಂಪತ್ತು ಪತ್ತೆ ಹಚ್ಚಿದ್ದಾರೆ.
![IT Raids on Kalki ashram](https://etvbharatimages.akamaized.net/etvbharat/prod-images/kn-bng-04-it-raid-script-7202806_18102019212258_1810f_1571413978_1.jpg)
ತಮಿಳುನಾಡಿನ ಚೆನ್ನೈ, ಆಂಧ್ರಪ್ರದೇಶ, ಬೆಂಗಳೂರು ಮತ್ತು ಚಿತ್ತೂರು ಸಮೀಪದ ವರದಯ್ಯಪಾಲಂ ಬಳಿ ಇರುವ ಕಲ್ಕಿ ಭಗವಾನ್ ಆಶ್ರಮ ಮತ್ತು ಅವರ ಮಗ ಕೃಷ್ಣ ಅವರಿಗೆ ಸೇರಿದ ಸಂಸ್ಥೆಗಳ ಮೇಲೆ ಐಟಿ ಇಲಾಖೆ ಕಳೆದ ಬುಧವಾರ ಏಕಕಾಲದಲ್ಲಿಯೇ 40 ಕಡೆ ದಾಳಿ ನಡೆಸಿತ್ತು. ದಾಳಿಯಲ್ಲಿ ₹ 93 ಕೋಟಿ ನಗದು, ಮತ್ತು ₹ 409 ಕೋಟಿ ಮೌಲ್ಯದ ಸಂಪತ್ತು ಪತ್ತೆಯಾಗಿದೆ ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಶ್ರಮದಲ್ಲಿ ಅಪಾರ ಪ್ರಮಾಣದ ವಿದೇಶಿ ಕರೆನ್ಸಿಗಳು ಸೇರಿದಂತೆ ₹ 43 ಕೋಟಿ ರೂಪಾಯಿ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
2.5 ಮಿಲಿಯನ್ ಯುಎಸ್ ಕರೆನ್ಸಿ (ಸುಮಾರು 18 ಕೋಟಿ ರೂ.)ಯನ್ನು ವಶಕ್ಕೆ ಪಡೆಯಲಾಗಿದೆ. ಮತ್ತು ₹ 26 ಕೋಟಿ ಮೌಲ್ಯದ ಅಘೋಷಿತ 88 ಕೆ.ಜಿ. ಚಿನ್ನದ ಆಭರಣಗಳು ಹಾಗೂ ₹ 5 ಕೋಟಿ ಮೌಲ್ಯದ 1,271 ಕ್ಯಾರೆಟ್ ವಜ್ರಗಳನ್ನು ಜಪ್ತಿ ಮಾಡಲಾಗಿದೆ. ಮತ್ತು ಈವರೆಗೂ ಬಹಿರಂಗಪಡಿಸದ ಆದಾಯವು ಸುಮಾರು ₹ 500 ಕೋಟಿ ರೂ.ಗಳಿಗಿಂತ ಅಧಿಕ ಎಂದು ಅಂದಾಜಿಸಲಾಗಿದೆ ಎಂದು ಐಟಿ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.