ಬೆಂಗಳೂರು : ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಇಂದು ಕೂಡ ಮುಂದುವರೆದಿದೆ. ನಿನ್ನೆ ಸದಾಶಿವನಗರ ಬಳಿ ಇರುವ ಮನೆಗೆ ದಾಳಿ ನಡೆಸಿದ ಐಟಿ ತಂಡ ರಾತ್ರಿವರೆಗೆ ಶೋಧ ಮುಂದುವರೆಸಿ ತಡರಾತ್ರಿಯಾದ ಕಾರಣ ಸದಾಶಿವನಗರದ ಮನೆಯಲ್ಲೇ ನಾಲ್ಕು ಜನ ಐಟಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.
ಸುಮಾರು ರಾತ್ರಿ 12:30ರವರೆಗೂ ಪರಂ ಅವರನ್ನ ಐಟಿ ವಿಚಾರಣೆಗೆ ಗುರಿ ಪಡಿಸಿತ್ತು. ಇನ್ನು ಐಟಿ ಮೂಲಗಳ ಪ್ರಕಾರ ನಿನ್ನೆ ವಿಚಾರಣೆ ನಡೆಸಿ ಮಹತ್ವದ ದಾಖಲೆಗಳನ್ನ ಪಡೆದು ಹಲವಾರು ಮಹತ್ವದ ಮಾಹಿತಿಯನ್ನ ಪರಂ ಅವರಿಂದ ಪಡೆದಿದ್ದಾರೆ. ಮತ್ತೊಂದೆಡೆ ನಾಲ್ಕು ಜನ ಐಟಿ ಅಧಿಕಾರಿಗಳ ತಂಡ ಇಂದು ಸಹ ಸದಾಶಿವನ ನಗರ ನಿವಾಸದಲ್ಲೆ ಬೀಡು ಬಿಟ್ಟು ಐಟಿ ಅಧಿಕಾರಿಗಳು ಶೋಧ ಮುಂದುವರೆಸಲಿದ್ದಾರೆ
ಇನ್ನು ಇಂದು ಐಟಿ ಅಧಿಕಾರಿಗಳು ಪರಮೇಶ್ವರ್ ಅವರು ವೈದ್ಯಕೀಯ ಸೀಟುಗಳ ಅಕ್ರಮ ಮಾರಾಟದ ಕುರಿತು ಇಂದು ಮಾಹಿತಿ ಕಲೆ ಹಾಕಲಿದ್ದಾರೆ. ಈಗಾಗಲೇ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ಮಾಡಿ ಶೋಧದಲ್ಲಿ ತೊಡಗಿದ್ದರೆ. ಡಾ.ಜಿ ಪರಮೇಶ್ವರ್ ಮತ್ತು ಆರ್.ಎಲ್ ಜಾಲಪ್ಪ ಅವರ ಶಿಕ್ಷಣ ಟ್ರಸ್ಟ್ ನಲ್ಲಿ ಅಖಿಲ ಭಾರತದ ಕೋಟಾದಡಿ ವೈದ್ಯಕೀಯ ಸೀಟುಗಳನ್ನ ಹಂಚಿಕೆ ಮಾಡಿರುವ ಆರೋಪದ ಮೇರೆಗೆ ದಾಳಿ ಮುಂದುವರೆದಿದೆ.
ಪರಂ ಮನೆಗೆ ರಾತ್ರಿ ಕೂಡ ಕಾಂಗ್ರೆಸ್ ಮುಂಖಡರ ಭೇಟಿ : ಪರಮೇಶ್ವರ್ ಮನೆಗೆ ಐಟಿ ದಾಳಿಯಾಗುತ್ತಿದ್ದ ಹಾಗೆ ಕಾಂಗ್ರೆಸ್ ಮುಖಂಡರಾದ ಎಂ.ಎಲ್.ಸಿ ವೇಣುಗೋಪಾಲ್, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ ಪರಮೇಶ್ವರ್ ಮನೆಗೆ ಭೇಟಿ ಕೊಟ್ಟು ಮಾತುಕತೆಗೆ ಮುಂದಾಗಿದ್ದಾರೆ. ಆದ್ರೆ, ಐಟಿ ಅಧಿಕಾರಿಗಳು ಯಾರನ್ನು ಒಳಗಡೆ ಬಿಡದೇ ಪರಂ ಮನೆಯ ಗೇಟ್ ನಿಂದ ಹೊರ ಕಳುಹಿಸುತ್ತಿದ್ದಾರೆ.
ಇನ್ನು ರಾತ್ರಿ ಎಂ.ಎಲ್.ಸಿ ವೇಣುಗೋಪಾಲ್ ಭೇಟಿ ಕೊಟ್ಟು ಮಾಧ್ಯಮ ಜೊತೆ ಮಾತನಾಡಿ ಪರಮೇಶ್ವರ್ ಅವರು ನನ್ನ ಜೊತೆ ಸಂಪರ್ಕ ಮಾಡಿ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ ಸಂದೇಶ ಕಳಿಸಿದ್ದಾರೆ. ಬಹಳಷ್ಟು ಅಭಿಮಾನಿಗಳು ತನಗೆ ಧೈರ್ಯ ತುಂಬುವ ಸಲುವಾಗಿ ಸೇರಿದ್ದಾರೆ. ಇನ್ನೂ ನಾಲ್ವರು ಅಧಿಕಾರಿಗಳು ಒಳಗಡೆ ಇದ್ದಾರೆ ನಾವು ಅವರಿಗೆ ಸಹಕಾರ ನೀಡಬೇಕು. ರಾಜ್ಯದ ನಾಯಕರು, ಜಿಲ್ಲಾ ಕಾಂಗ್ರೆಸ್ ಮುಖಂಡರಿಗೆ ಇಂದು ಮಾಧ್ಯಮ ಮೂಲಕ ಸ್ಪಷ್ಟನೆ ನೀಡುತ್ತೇನೆ. ಬಿಜೆಪಿಯ ಈ ಹಿಟ್ಲರ್ ಧೋರಣೆ ವಿರುದ್ಧ ನಾವು ಹೋರಾಟ ಮಾಡಬೇಕು. ರಾತ್ರಿ ಇಲ್ಲಿ ಯಾರೂ ಕಾಯುವುದು ಬೇಡ, ನಾನೇ ನಾಳೆ ಎಲ್ಲರಿಗೂ ಮಾಹಿತಿ ನೀಡುತ್ತೇನೆ ಎಂದು ಪರಮೇಶ್ವರ್ ತಿಳಿಸಿದ್ದಾರೆಂದು ವೇಣುಗೋಪಾಲ್ ಅವರು ತಿಳಿಸಿದ್ದಾರೆ.