ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಯಲ್ಲಿ ಬಾಂಬ್ ಇರುವುದಾಗಿ ಬೆದರಿಕೆಯ ಇ-ಮೇಲ್ ಸಂದೇಶ ರವಾನೆಯಾಗಿದೆ. ಇದರ ಬೆನ್ನಲ್ಲೇ ಬಾಂಬ್ ನಿಷ್ಕ್ರಿಯ ಹಾಗೂ ಶ್ವಾನದಳ ವಿಭಾಗದಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ನಿನ್ನೆ ರಾತ್ರಿ ಸುಮಾರು 10.45 ವೇಳೆ ಐಟಿಯ ಕಸ್ಟಮ್ ಡೆಪ್ಯೂಟಿ ಕಮಿಷನರ್ ನಾಗಾರ್ಜುನ ಎಂಬುವರ ಇಮೇಲ್ಗೆ ಗೋವಿಂದ್ ಹೆಸರಿನಲ್ಲಿ ಪ್ರೋಟಾನ್ ಡಾರ್ಕ್ ನೆಟ್ ಮೂಲಕ ಐಟಿ ಕಚೇರಿಯಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಹಾಕಿದ್ದಾನೆ. ಇಮೇಲ್ ಬರುತ್ತಿದ್ದಂತೆ ಐಟಿ ಅಧಿಕಾರಿಗಳು ತಕ್ಷಣವೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಸುಮಾರು 300 ಮಂದಿ ಪೊಲೀಸರು ದೌಡಾಯಿಸಿದ್ದರು. ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯದಳ ರಾತ್ರಿಯಿಂದ ನಿರಂತರವಾಗಿ ಐಟಿ ಕಚೇರಿಯಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ಈ ಹಿಂದೆ ಕೂಡ ಐಟಿ ಕಚೇರಿಗೆ ಹುಸಿ ಬಾಂಬ್ ಕರೆ ಬಂದಿತ್ತು. 1991-92ರಲ್ಲಿ ಬೆಳಗ್ಗೆ 11:30ರ ವೇಳೆ ಹುಸಿ ಬಾಂಬ್ ಕರೆ ಬಂದಿತ್ತು. ಆಗಲೂ ಕೂಡ ಇದೇ ರೀತಿ ಗೊಂದಲ ಉಂಟಾಗಿತ್ತು. 27 ವರ್ಷಗಳ ಬಳಿಕ ಪುನಃ ಇಂತಹದೊಂದು ಘಟನೆ ಮರುಕಳಿಸಿದೆ.