ಬೆಂಗಳೂರು: ತನ್ನ ತಾಯಿಯೊಂದಿಗೆ ಭಾರತದಲ್ಲಿ ನೆಲೆಸಿರುವ ನಾಲ್ಕು ವರ್ಷದ ಹೆಣ್ಣು ಮಗಳನ್ನು ತನ್ನ ವಶಕ್ಕೆ ನೀಡಲು ನಿರ್ದೇಶಿಸುವಂತೆ ಕೋರಿ ಅಮೆರಿಕದಲ್ಲಿ ನಲೆಸಿರುವ ತಂದೆಯೊಬ್ಬರು ಸಲ್ಲಿಸಿದ್ದ ಹೇಬಿಯಾಸ್ ಕಾರ್ಪ್ಸ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ಆದೇಶಿಸಿದೆ.
ಅಮೆರಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆಯುವ ಸಂದರ್ಭದಲ್ಲಿ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿ ಭಾರತಕ್ಕೆ ತನ್ನ ಮಗಳನ್ನು ಕರೆದೊಯ್ದಿದ್ದಾರೆ ಎಂದು ಆರೋಪಿಸಿ ಅಮೆರಿಕ ನಿವಾಸಿ ಭಾರತ ಮೂಲದ ವ್ಯಕ್ತಿ(ತಂದೆ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಮತ್ತು ಟಿ.ಜಿ.ಶಿವಶಂಕರೇ ಗೌಡ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.
ಅಲ್ಲದೆ, ನಾಲ್ಕು ವರ್ಷದ ಹೆಣ್ಣು ಮಗಳಿಗೆ ತನ್ನ ತಾಯಿ ಜೊತೆಗೆ ಮಾತ್ರ ನೆಮ್ಮದಿಯಿಂದ ಇರಬಹುದು. ಮಗು ತಕ್ಷಣದ ಸ್ಥಿತಿಯಲ್ಲಿ ತಾಯಿಯ ಸುಪರ್ದಿಯಲ್ಲಿರುವುದೇ ಲೇಸು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಪತಿ(ಅರ್ಜಿದಾರರು) ಆರ್ಥಿಕವಾಗಿ ಸದೃಢವಾಗಿದ್ದರೂ, ಪ್ರಸ್ತುತ ಪ್ರಕರಣದಲ್ಲಿ ದಂಪತಿ ಕಟುವಾದ ಹಗೆತನ ಹೊಂದಿದ್ದಾರೆ. ಈ ರೀತಿಯ ಸಂದರ್ಭದಲ್ಲಿ ಪತ್ನಿಯನ್ನು ಅಮೆರಿಕಗೆ ತೆರಳುವಂತೆ ಒತ್ತಾಯಿಸುವುದು ಸೂಕ್ತವಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಮಗುವಿನ ತಾಯಿ, ವಿದೇಶಿ ನ್ಯಾಯಾಲಯದ ಆದೇಶ ಉಲ್ಲಂಘನೆ ಹೊರತುಪಡಿಸಿ ತಾಯಿಯಿಂದ ಮಗುವು ತೊಂದರೆಗೊಳಗಾಗುತ್ತಿದೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಹಾಗಾಗಿ ತಾಯಿಯ ಪಾಲನೆಯಲ್ಲಿ ಮಗುವಿರುವುದು ಕಾನೂನಿಗೆ ವಿರುದ್ಧವಲ್ಲ. ಅಲ್ಲದೆ ಅಕ್ರಮ ವಶದಲ್ಲಿಟ್ಟಿಕೊಂಡಿದ್ದಾರೆ ಎನ್ನಲಾಗುವುದಿಲ್ಲ. ಜತೆಗೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವನ್ನು ತಾಯಿಯೊಂದಿಗೆ ಪಾಲನೆ ಮಾಡುವುದು ಕಾನೂನುಬದ್ದ ಎಂದು ಪೀಠ ಹೇಳಿದೆ.
2022ರ ಸೆಪ್ಟಂಬರ್ ತಿಂಗಳಲ್ಲಿ ತಾಯಿ ಮಗಳೊಂದಿಗೆ ಭಾರತಕ್ಕೆ ತೆರಳಿದ್ದು ಜಮ್‌ಶೆಡ್‌ಪುರದಲ್ಲಿ ವಾಸಿಸುತ್ತಿದ್ದು, ಮಗುವನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೆ, ಎಂಟು ತಿಂಗಳ ಬಳಿಕ ಅಂದರೆ 2023 ರ ಮೇ 25ರಂದು ಸಲ್ಲಿಸಲಾಗಿದೆ. ಭಾರತಕ್ಕೆ ತೆರಳಿದ ಎಂಟು ತಿಂಗಳು ಕಳೆದಿದಿದೆ. ಈ ಸಂದರ್ಭದಲ್ಲಿ ಮಗು ತನ್ನೊಟ್ಟಿಗೆ ಇರಲಿಲ್ಲ. ಇದು ಭಾವನಾತ್ಮಕವಾಗಿ ಕಾಡಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.ಆದರೂ 8 ತಿಂಗಳ ಕಾಲ ಅರ್ಜಿದಾರರ ನ್ಯಾಯಾಲಯದ ಮೆಟ್ಟಿಲೇರಿಲ್ಲ ಎಂಬುದು ಮುಖ್ಯವಾಗಿ ಪರಿಗಣಿಸಬಹುದಾಗಿದೆ.
ಪ್ರಕರಣವನ್ನು ತಮ್ಮ ಕಚೇರಿಯಲ್ಲಿ ಮಾತ್ರ ವಿಚಾರಣೆಗೊಳಪಡಿಸಿದ ನ್ಯಾಯಪೀಠ, ಈ ಸಂದರ್ಭದಲ್ಲಿ ಮಗು ತಾಯಿಯೊಂದಿಗೆ ಮಾತ್ರ ನೆಮ್ಮದಿಯಾಗಿರುವುದಕ್ಕೆ ಅವಕಾಶವಿರಲಿದೆ ಎಂಬ ಅಂಶ ಗೊತ್ತಾಗಿದೆ. ಜತೆಗೆ ಅರ್ಜಿದಾರರು ಜೇಮ್‌ಶೆಡ್‌ಪುರದಲ್ಲಿ ನೆಲೆಸಿದ್ದ ಮಗಳನ್ನು ಭೇಟಿ ಮಾಡಬಹುದಾಗಿದೆ. ಫೋನ್ ಕರೆ ಮಾಡಿ ಮಾತನಾಡಬಹುದಾಗಿದೆ ಎಂದು ಪತ್ನಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ತಮ್ಮ ಮಗಳು ಯುಎಸ್ಎನಲ್ಲಿ ಜನಿಸಿದ್ದ ಅಲ್ಲಿನ ಪ್ರಜೆಯಾಗಿದ್ದಾರೆ. ಅಮೆರಿಕದ ಕಾಂಟ್ರಾ ಕೋಸ್ಟಾದ ಕೌಂಟಿಯ ಕ್ಯಾಲಿಫೋರ್ನಿಯಾದ ಸುಪೀರಿಯರ್ ಕೋರ್ಟ್ ಆದೇಶದ ಅನ್ವಯ ತನಗೆ ಮತ್ತು ಪತ್ನಿಗೆ ಮಗುವಿನ ಪೋಷಣೆಯು ಇಬ್ಬರೂ ಪೋಷಕರಿಗೆ ಸಮನಾಗಿರಲಿದೆ ಎಂದು ನ್ಯಾಯಾಲಯ ಆದೇಶಿಸಿತು. ಇದರೊಂದಿಗೆ ದಂಪತಿಯಲ್ಲಿ ಯಾರೊಬ್ಬರೂ ಲಿಖಿತ ಅನುಮತಿ ಮತ್ತು ನ್ಯಾಯಾಲಯದ ಆದೇಶವಿಲ್ಲದೆ ಮಗುವನ್ನು ಕರೆದುಕೊಂಡು ಹೋಗುವಂತಿಲ್ಲ ಎಂದು 2022ರ.ಜು.30 ರಂದು ಆದೇಶಿಸಿತ್ತು.
ಆದರೆ, ಇದನ್ನು ಮೀರಿ ಪತ್ನಿ ಇಮೇಲ್ ಮೂಲಕ ರಜೆಗಾಗಿ ಮೂರು ವಾರಗಳ ಕಾಲ ಮಗುವನ್ನು ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದರು. ನಿಯಮ ಉಲ್ಲಂಘಿಸಿ 2022 ರ ಸೆ.8 ರಂದು ಮಗುವನ್ನು ಬೆಂಗಳೂರಿಗೆ ಕರೆದೊಯ್ಯದ್ದಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ತಕ್ಷಣ ಪತ್ತೆ ಹಚ್ಚಿ ಮಗಳ ಪಾಲನೆಗೆ ಅನುವು ಮಾಡಿಕೋಡಬೇಕು ಎಂದು ಹೇಬಿಯಾಸ್ ಕಾರ್ಪ್ಸ್ ಅರ್ಜಿ ಸಲ್ಲಿಸಿದ್ದರು.
ಇದನ್ನೂಓದಿ: ಹುಬ್ಬಳ್ಳಿ: ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಗೆ ಜಾಮೀನು ಮಂಜೂರು