ಬೆಂಗಳೂರು : ಒಂದು ಹಂತದಲ್ಲಿ ರಾಜಕೀಯ ಚಟುವಟಿಕೆ ನಡೆಯುತ್ತಿದೆ ಅನ್ನೋದು ಸಹಜ. ಇದಕ್ಕೆ ಇತಿಶ್ರೀ ಹಾಕಲು ಯತ್ನ ಮಾಡಲಾಗ್ತಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.
ನಾಯಕತ್ವ ಬದಲಾವಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಧ್ಯಕ್ಷರ ಬದಲಾವಣೆ ಇಲ್ಲ. ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಕೆಲವರಿಂದ ಕೆಲವು ಕಡೆ ಹೇಳಿಕೆ ಕೊಡಲಾಗ್ತಿದೆ. ಯಾರಿಗೋ ಸೈಡಿಗೆ ಹೋಗಿ ಅಂದರೆ, ಅವನಿಗೆ ನಡೆಯಲು ಅಡ್ಡಿ ಮಾಡಿದಂತಲ್ಲ ಎಂದು ಸೂಚ್ಯವಾಗಿ ತಿಳಿಸಿದರು.
ಯೋಗೇಶ್ವರ್ ಮತ್ತು ಯತ್ನಾಳ್ ಹೇಳಿಕೆಗೆ ಪುಲ್ ಸ್ಟಾಪ್ ಹಾಕಬೇಕಾಗಿದೆ. ಅದಕ್ಕೆ ಪಕ್ಷ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಇದೇ ವೇಳೆ ತಿಳಿಸಿದರು. ಖಾಸಗಿಯವರ ಸಹಕಾರದಿಂದ ಲಸಿಕೆ ಪಡೆದು ಎಲ್ಲಾ ವರ್ಗಕ್ಕೆ ಹಾಕಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ.
ಯಾರು ಏನು ಕೆಲಸ ಮಾಡಬೇಕು, ಅದನ್ನು ಮಾಡಬೇಕು. ಅವರವರ ಜವಾಬ್ದಾರಿ ಅದರಷ್ಟಕ್ಕೆ ನಡೆಯಲಿದೆ. ನಮ್ಮ ಉದ್ದೇಶ ಕೊರೊನಾ ಹೊಡೆದೊಡಿಸಬೇಕು. ನಾವು ಈ ಕೆಲಸ ಮಾಡ್ತಿದ್ದೇವೆ.
ಈವರೆಗೆ ನಾವು 20 ಕೋಟಿ ಲಸಿಕೆ ಉತ್ಪಾದನೆ ಮಾಡಿ ಕೊಟ್ಟಿದ್ದೇವೆ. ಈಗ ರೆಮಿಡಿಸಿವಿರ್ ಅಗತ್ಯತೆ ಕಡಿಮೆ ಆಗಿದೆ. ಮೊದಲು ತೊಂದರೆ ಆಗಿದ್ದು ಸಹಜ. ಈಗ ಬ್ಲಾಕ್ ಫಂಗಸ್ಗೆ ಔಷಧ ಅಗತ್ಯ ಇದೆ ಎಂದರು.
ಈಗಾಗಲೇ ಬ್ಲ್ಯಾಕ್ ಫಂಗಸ್ ಔಷಧ ಉತ್ಪಾದನೆಗಾಗಿ 5 ಯುನಿಟ್ ಕೆಲಸ ಮಾಡ್ತಿದೆ. ಇನ್ನೂ 6 ಕಡೆ ತಯಾರಿಕಾ ಘಟಕ ತೆರೆಯಲು ಅನುಮತಿ ಕೊಡಲಾಗಿದೆ. ಮೊದಲು 23 ಲಕ್ಷ ಡೋಸ್ ಮಾತ್ರ ಉತ್ಪಾದನೆ ಮಾಡಲಾಗುತ್ತಿತ್ತು. ಈಗ 1.13 ಕೋಟಿ ಡೋಸ್ ಉತ್ಪಾದನೆ ಮಾಡಲಾಗುತ್ತಿದೆ. ಪರಿಸ್ಥಿತಿ ಈಗ ಸುಧಾರಣೆ ಆಗಿದೆ. ಆರಂಭದಲ್ಲಿ ಗೊಂದಲ ಇದ್ದೇ ಇರುತ್ತದೆ ಎಂದರು.